ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್ (ಸಂಗ್ರಹ ಚಿತ್ರ)
ಬೆಂಗಳೂರು: ಬೆಂಗಳೂರಿನ ರಸ್ತೆ ಪ್ರಯಾಣವನ್ನು ಪರಿಸರ ಸ್ನೇಹಿಯಾಗಿಸಲು ಬಿಎಂಟಿಸಿ ಮುಂದಾಗಿದ್ದು, ವರ್ಷಾಂತ್ಯಕ್ಕೆ 150 ಎಲೆಕ್ಟ್ರಿಕ್ ಬಸ್ ಗಳು ಸಂಚರಿಸಲಿವೆ.
ಸೆಪ್ಟೆಂಬರ್ ವೇಳೆಗೆ 150 ಎಲೆಕ್ಟ್ರಿಕ್ ಬಸ್ ಗಳನ್ನು ಖರೀದಿಸಲಾಗುವುದು ಎಂದು ಯುಐಟಿಪಿ ಇಂಡಿಯಾ ಸೆಮಿನಾರ್ ನಲ್ಲಿ ಭಾಗವಹಿಸಿ ಮಾತನಾಡಿರುವ ಬಿಎಂಟಿಸಿ ಎಂ.ಡಿ (ವ್ಯವಸ್ಥಾಪಕ ನಿರ್ದೇಶಕಿ) ಏಕ್ ರೂಪ್ ಕೌರ್ ಮಾಹಿತಿ ನೀಡಿದ್ದಾರೆ. ರಾಜ್ಯ ಸಾರಿಗೆ ಉದ್ಯಮಕ್ಕೆ ಎಲೆಕ್ಟ್ರಾನಿಕ್ ಬಸ್ ಗಳು ಸೂಕ್ತವಾಗಿದ್ದು, ಪರಿಸರ ಸ್ನೇಹಿ, ಕಡಿಮೆ ನಿರ್ವಹಣೆ ಹಾಗೂ ಪ್ರಯಾಣಿಕರಿಗೂ ಆರಾಮದಾಯಕವಾಗಿರಲಿದೆ. ಡೀಸೆಲ್ ವಾಹನಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ಬಸ್ ಗಳ ಕಾರ್ಯನಿರ್ವಹಣೆ ವೆಚ್ಚವೂ ಕಡಿಮೆ ಇರಲಿದೆ ಎಂದು ಕೌರ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ನ್ಯಾಷನಲ್ ಎಲೆಕ್ಟ್ರಿಕ್ ಮೊಬಿಲಿಟಿ ಸಮಿತಿಯ ಯೋಜನೆ-2020 ಅಡಿಯಲ್ಲಿ ವಿದ್ಯುತ್ ಚಾಲಿತ ವಾಹನಗಳ ಅಳವಡಿಕೆಗೆ ಬಿಎಂಟಿಸಿ ಈಗಾಗಲೇ ತಾತ್ವಿಕ ಅನುಮೋದನೆ ನೀದಿದೆ. ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಸರ್ಕಾರಿ ಸಂಸ್ಥೆಯೊಂದು ಎಲೆಕ್ಟ್ರಿಕ್ ಬಸ್ ಗಳನ್ನು ಖರೀದಿಸಿ ಕಾರ್ಯಾರಂಭ ಮಾಡುತ್ತಿದೆ ಎಂದಿದ್ದಾರೆ ಏಕ್ ರೂಪ್ ಕೌರ್.