ದಾವಣಗೆರೆ: ಕನ್ನಡ ಸಾಹಿತ್ಯ ಬರಹಗಾರ ಯೋಗೇಶ್ ಮಾಸ್ಟರ್ ಅವರ ಮುಖಕ್ಕೆ ಅಪರಿಚಿತ ವ್ಯಕ್ತಿಗಳು ಕಪ್ಪು ಶಾಯಿ ಬಳಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಸು ದಾಖಲಿಸಲಾಗಿದೆ.
ಕನ್ನಡದ ವಿವಾದಾತ್ಮಕ ಕಾದಂಬರಿ 'ದುಂಡಿ'ಯ ಲೇಖಕರಾಗಿರುವ ಯೋಗೇಶ್ ಮಾಸ್ಟರ್ ಅವರ ಮುಖಕ್ಕೆ ನಿನ್ನೆ ದಾವಣಗೆರೆಯಲ್ಲಿ ಅಪರಿಚಿತ ವ್ಯಕ್ತಿಗಳು ಕಪ್ಪು ಬಣ್ಣದ ಶಾಯಿಯನ್ನು ಬಳಿದಿದ್ದರು. ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹೊರಗೆ ಚಹಾ ಸೇವಿಸಲು ಬಂದಿದ್ದ ವೇಳೆ ಯೋಗೇಶ್ ಅವರ ಮುಖಕ್ಕೆ ಶಾಯಿ ಬಳಿಯಲಾಗಿತ್ತು.
ಕೆಲ ಬಲ ಪಂಥೀಯ ಸಂಘಟನೆಗಳು ಈ ಕೃತ್ಯದ ಹಿಂದೆ ಇರಬಹುದು ಎಂದು ಹೇಳಲಾಗುತ್ತಿದೆ. ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲ.