ಕೊಲೆಯಾದ ವಾಸು ಮತ್ತು ಬಂಧಿತ ಆರೋಪಿಗಳು
ಬೆಂಗಳೂರು: ಹೊಸೂರು ರಸ್ತೆಯ ಬಿಟಿಎಲ್ ಕಾಲೇಜು ಬಳಿ ನಡೆದಿದ್ದ ಬೊಮ್ಮಸಂದ್ರ ಪುರಸಭೆಯ ಬಿಜೆಪಿ ಸದಸ್ಯ ಶ್ರೀನಿವಾಸ ಪ್ರಸಾದ್ ಅಲಿಯಾಸ್ ವಾಸು (43) ಕೊಲೆ ರಹಸ್ಯ ಬಯಲಾಗಿದ್ದು, ಪುರಸಭೆ ಕಾಂಗ್ರೆಸ್ ಸದಸ್ಯೆ ಸರೋಜಮ್ಮ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಸರೋಜಮ್ಮ (45) ಆನೇಕಲ್‌ನ ಬನಹಳ್ಳಿ ಗ್ರಾಮದವರು. ಅವರ ಜತೆ ಸಿಂಗೇನ ಅಗ್ರಹಾರದ ಮಧು ಅಲಿಯಾಸ್ ಸ್ಟ್ರೈಕ್ (23), ರಾಂಪುರದ ನಾರಾಯಣಸ್ವಾಮಿ (35), ಮುರಳಿ (20) ಹಾಗೂ ಕರ್ಪೂರಿನ ಸಿ.ಮಂಜುನಾಥ (29) ಎಂಬುವರನ್ನು ಬಂಧಿಸಲಾಗಿದೆ.
ಪ್ರಕರಣ ಪ್ರಮುಖ ಆರೋಪಿ ಸರೋಜಮ್ಮ ಅವರ ಮಗ ಆರ್.ಮಂಜುನಾಥ್ ತಲೆಮರೆಸಿಕೊಂಡಿದ್ದಾನೆ. ಮಂಜುನಾಥ್ ಅಲಿಯಾಸ್ ಜಿಮ್ ಮಂಜನ ಬಂಧನವಾದರೇ ಕೊಲೆಗೆ ಏನು ಕಾರಣ ಎಂಬುದನ್ನು ತಿಳಿದುಕೊಳ್ಳಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ವಾಸು ಅವರ ಹತ್ಯೆ ಪೂರ್ವ ನಿಯೋಜಿತ ಕೃತ್ಯವಾಗಿದೆ. ಇದರ ಹಿಂದೆ ಸ್ಥಳೀಯ ರಾಜಕಾರಣಿಗಳ ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ ನಂತರ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಶ್ರೀನಿವಾಸ್ ಪ್ರಸಾದ್ ಅವರ ಹತ್ಯೆಗೆ ಹಣ ನೀಡಿದವರು ಯಾರು ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.