ಪಕ್ಷಿಗಳಿಗೆ ಆಶ್ರಯದಾತ ನಗರದ ಈ ಪಕ್ಷಿ ಪ್ರಿಯ!
ಬೆಂಗಳೂರು: ಕಾಲ ಬದಲಾದಂತೆ ಪರಿಸ್ಥಿತಿಗೆ ಹೊಂದುಕೊಳ್ಳುತ್ತಿರುವ ಮನುಷ್ಯ ನೈಸರ್ಗಿಕ ಮನೋಲ್ಲಾಸಗಳನ್ನು ಅನುಭವಿಸುವುದನ್ನೇ ಮರೆತು ಹೋಗುತ್ತಿದ್ದಾನೆ. ಮನೆ, ಕೆಲಸ, ಕಚೇರಿಯೆಂದು ದಿನ ಕಳೆಯುವ ಮನುಷ್ಯರಿಗೆ ನಿಸರ್ಗದೊಂದಿಗೆ ಕಾಲ ಕಳೆಯುವುದಕ್ಕೂ ಸಮಯವಿಲ್ಲದಂತಾಗಿದೆ.
ಹಿಂದೆಲ್ಲಾ ನಮ್ಮ ಹಿರಿಯರು ಮನೆಯ ಮೇಲ್ಚಾವಣಿಗಳ ಮೇಲೆ ಧಾನ್ಯಗಳನ್ನು ಹಾಕುವ ಮೂಲಕ ಪಕ್ಷಿಗಳ ಸಂಕುಲಗಳನ್ನು ಸಂರಕ್ಷಿಸುತ್ತಿದ್ದರು. ಆಗಸ ನೋಡುತ್ತಿದ್ದಂತೆ ಪಕ್ಷಿಗಳ ಹಾರಾಟ ಮನಸ್ಸಿಗೆ ಮುದ ನೀಡುತ್ತಿತ್ತು. ಆದರೆ, ಆಧುನಿಕ ಯುಗದ ಭರಾಟೆಯ ಹೊಡೆತಕ್ಕೆ ಸಿಲುಕಿರುವ ಪಕ್ಷಿಗಳು ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗುತ್ತಿವೆ. ಪಕ್ಷಿಗಳ ಸಂಕುಲ ದಿನ ಕಳೆಯುತ್ತಿದ್ದಂತೆ ಕ್ಷೀಣಿಸ ತೊಡಗಿವೆ.
ಬರದ ಬವಣೆಯನ್ನು ಮನುಷ್ಯರಾದ ನಮಗೆ ಸಹಿಸಿಕೊಳ್ಳಲು ಅಸಾಧ್ಯವೆಂದು ಅನಿಸತೊಡಗಿದೆ. ಇನ್ನು ಮೂಕ ಪ್ರಾಣಿಗಳ ವೇದನೆಯನ್ನು ಕೇಳುವವರು ಯಾರು...? ಆಧುನಿಕ ಜಗತ್ತಿಗೆ ಮಾರು ಹೋಗಿ ಸಂಬಂಧಗಳನ್ನೇ ಕಡೆಗಣಿಸುತ್ತಿರುವ ಮನುಷ್ಯರು ಮೂಕ ಪಕ್ಷಿಗಳ ಒಡನಾಟಗಳ ಬಗ್ಗೆ ಕೇಳುವರೇ...? ಬರದ ಬವಣೆಗೆ ಸಿಲುಕಿ ಬಳಲುತ್ತಿರುವ ಪ್ರಾಣಿ, ಪಕ್ಷಿಗಳಿಗೆ ಆಹಾರ ನೀರು, ಒದಗಿಸುವ ಕೆಲಸ ಆಗಬೇಕು, ಹೀಗೆಂದು ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ಹರಿಬಿಡುತ್ತಿರುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ಎಲ್ಲರೂ ಸಂದೇಶವನ್ನು ಹೇಳುವವರೇ...ಆದರೆ, ಅನುಸರಿಸುವವರ ಸಂಖ್ಯೆ ಮಾತ್ರ ತೀರಾ ವಿರಳ. ಆದರೆ, ಇಲ್ಲೊಬ್ಬ ವ್ಯಕ್ತಿ ತಮ್ಮ ಕೆಲಸದ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.
ಏರ್ ಕಂಡೀಷರನ್ ಇಂಜಿನಿಯರ್ ಆಗಿರುವ ನಗರದ ದೊಮ್ಮಲೂರು ನಿವಾಸಿ ಸುನಿಲ್ ಮಾಳ್ವಿನ್ (58) ಅವರು ಕಳೆದ 15 ವರ್ಷಗಳಿಂದಲೂ ಪಕ್ಷಿಗಳಿಗೆ ಆಹಾರ, ನೀರು ಒದಗಿಸುವ ಮೂಲಕ ಆಹಾರದ ಕೊರತೆ, ನೀರಡಿಕೆ ತೀರಿಸುವ ಪುಣ್ಯದ ಕೆಲಸವನ್ನು ಮಾಡುತ್ತಿದ್ದಾರೆ.
ಕೋಲ್ಕತಾಗೆ ಭೇಟಿ ನೀಡಿ ಮನೆಗೆ ಬರುವಾಗ 4-5 ಪಕ್ಷಿಗಳೊಂದಿಗೆ ಮನೆಗೆ ಬಂದಿದ್ದೆ. ಇದೀಗ ಮನೆಯ ಬಳಿ 300ಕ್ಕೂ ಹೆಚ್ಚು ಪಕ್ಷಿಗಳು ಬರುತ್ತವೆ. ಪಾರಿವಾಳ ಹಾಗೂ ಅಳಿಲು ಪ್ರತೀನಿತ್ಯ ಬರುತ್ತಿರುತ್ತವೆ. ಕೆಲವೊಮ್ಮೆ ವಿವಿಧ ಜಾತಿಯ ಪಕ್ಷಿಗಳು ಬರುತ್ತವೆ. ಅವುಗಳನ್ನು ಗುರ್ತಿಸಲು ನನಗೆ ಸಾಧ್ಯವಾಗುವುದಿಲ್ಲ. ಬೆಳಿಗ್ಗೆ 6.30ಕ್ಕೆ ಪಕ್ಷಿಗಳೇ ನನ್ನನ್ನು ಎದ್ದೇಳಿಸುತ್ತವೆ. ನಾನೇ ತಡವಾಗಿ ಬಂದಾಗ ಪಕ್ಷಿಗಳೊಂದಿಗೆ ಕ್ಷಮೆಯಾಚಿಸುತ್ತೇನೆಂದು ಸುನಿಲ್ ಅವರು ಹೇಳಿದ್ದಾರೆ.
ವರ್ಷದ ಹಿಂದೆ ಗಾಯಗೊಂಡಿದ್ದ ಹದ್ದುವೊಂದು ಮನೆಯ ಬಳಿ ಬಂದಿತ್ತು. ನಂತರ ನಾನು ಮತ್ತು ನನ್ನ ಕುಟುಂಬದವರು ಅದನ್ನು ಮನೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದೆವು. ಗ್ಲೂಕೋಸ್ ಹಾಕಿದ ನೀರನ್ನು ಮೂರು ದಿನಗಳ ಕಾಲ ನೀಡಿದ್ದೆವು. ಸುಧಾರಿಸಿಕೊಂಡಿದ್ದ ಹದ್ದು ನಾಲ್ಕು ದಿನ ಹಾರಿ ಹೋಗಿತ್ತು. ಇಂದಿಗೂ ಆ ಹದ್ದು ಪ್ರತೀನಿತ್ಯ ಮನೆಯ ಬಳಿ ಬರುತ್ತದೆ. ಇದೀಗ ಆ ಹದ್ದು ನಾನು ಗೆಳಯರಾಗಿದ್ದೇವೆ.
ಪ್ರತೀನಿತ್ಯ ಪಕ್ಷಿಗಳಿಗೆ ಗೋದಿ, ರಾಗಿ, ಅಕ್ಕಿ ಮಿಶ್ರಿತ ಧಾನ್ಯಗಳನ್ನು ನೀಡುತ್ತೇನೆ. ತಿಂಗಳಿಗೆ ಪಕ್ಷಿಗಳ ಧಾನ್ಯಕ್ಕೆಂದೇ ರೂ.2,500 ಹಣವನ್ನು ಖರ್ಚು ಮಾಡುತ್ತೇನೆ. ಅಳಿಲುಗಳಿಗೂ ಆಹಾರವನ್ನು ನೀಡುತ್ತೇನೆ. ಅಳಿಲುಗಳಿಗಾಗಿಯೇ ಮರದ ಗೂಡನ್ನು ಕಟ್ಟಿದ್ದೇನೆ. ಅಳಿಲುಗಳು ಗೂಡಿಗೆ ಬಂದು ಮಕ್ಕಳಿಗೆ ಜನ್ಮ ನೀಡುತ್ತವೆ ಎಂದು ತಿಳಿಸಿದ್ದಾರೆ.
ನನ್ನ ಕಾರನ್ನು ಪಕ್ಷಿಗಳು ಗುರ್ತಿಸುತ್ತವೆ. ನನ್ನ ಪಕ್ಷಿ ಪ್ರೇಮದಿಂದ ನೆರೆಮನೆಯವರು ಬೇಸರಗೊಂಡಿಲ್ಲ. ಬೆಳಿಗ್ಗೆ 8 ಗಂಟೆಯೊಳಗೆ ಆಹಾರ ತಿಂದು ಪಕ್ಷಿಗಳು ಹೊರಟು ಹೋಗುತ್ತವೆ. ನಾನು ಮನೆಗೆ ಬಂದಾಗ ಮಾತ್ರ ಪಕ್ಷಿಗಳು ಮನೆಯ ಹತ್ತಿರ ಬರುತ್ತವೆ. ನನ್ನ ಕಾರು ನೋಡುತ್ತಿದ್ದಂತೆಯೇ ಮನೆಯ ಬಳಿ ಬರುತ್ತವೆ. ನೋಡುವವರಿಗೆ ಇದು ಆಶ್ಚರ್ಯವೆನಿಸುತ್ತದೆ. ಬೇರೊಬ್ಬರ ಕಾರು ಬಂದ ಕೂಡಲೇ ಪಕ್ಷಿಗಳು ಹಾರಿ ಹೋಗುತ್ತವೆ. ಆದರೆ, ನನ್ನ ಕಾರು ನೋಡಿದಾಗ ಮಾತ್ರ ಸಂತೋಷದಿಂದ ಮನೆಯ ಬಳಿ ಬರುತ್ತವೆ. ಇದೀಗ ಪಕ್ಷಿಗಳಿಂದಾಗಿ ನನಗೆ ಕಾರು ಬದಲಿಸಲು ಮನಸ್ಸಾಗುತ್ತಿಲ್ಲ.
ಮನೆಯನ್ನು ಬದಲಾಯಿಸಲು ಮನಸ್ಸಾಗುತ್ತಿಲ್ಲ. ದೀಪಾವಳಿ ಬಂದಾಗ ನನಗೆ ಬಹಳ ಬೇಸರವಾಗುತ್ತದೆ. ಪಟಾಕಿ ಶಬ್ಧದಿಂದಾಗಿ ಪಕ್ಷಿಗಳು ಆ ಸಮಯದಲ್ಲಿ ಮನೆಯ ಬಳಿ ಬರುವುದಿಲ್ಲ. ಮನೆಯ ಬಳಿ ಪಟಾಕಿ ಹೊಡೆಯುವುದಕ್ಕೂ ನಾನು ಬಿಡುವುದಿಲ್ಲ. ನಾನು ಮನೆಯಲ್ಲಿಲ್ಲದಿದ್ದಾಗ ನನ್ನ ಪತ್ನಿ ಹಾಗೂ ಮಗಳು ಪಕ್ಷಿಗಳಿಗೆ ಆಹಾರ ನೀಡುತ್ತಾರೆ. ನಾನು ಅಥವಾ ಮನೆಯವರಾರು ಮನೆಯಲ್ಲಿಲ್ಲ ಎಂದಾದರೆ, ಮನೆಯ ಕೆಲಸದಾಕೆ ಪಕ್ಷಿಗಳಿಗೆ ಆಹಾರ ನೀಡುತ್ತಾರೆಂದು ಸುನಿಲ್ ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos