ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್
ಮಂಗಳೂರು: ಕೆಂಪು ದೀಪ ನನ್ನ ತಲೆ ಮೇಲೆ ಇದ್ದಿದ್ದರೆ ತೆಗೆಯಬಹುದಿತ್ತು. ಅದರೆ, ಅದು ನನ್ನ ತಲೆ ಮೇಲಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಅವರು ಸೋಮವಾರ ಹೇಳಿದ್ದಾರೆ.
ಮೂಡುಬಿದಿರೆಯ ಎಂಸಿಎಸ್ ಬ್ಯಾಂಕ್ ನಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮಕ್ಕೆ ಬೆಳಿಗ್ಗೆ 9 ಗಂಟೆಗೆ ಬರಬೇಕಿದ್ದ ಸಚಿವರು 12 ಗಂಟೆಗೆ ಬಂದರು. ಈ ವೇಳೆ ಕೆಂಪು ದೀಪ ಇದ್ದ ಕಾರಿನಿಂದ ಇಳಿದು ಎಲ್ಲರ ಗಮನ ಸೆಳೆದ ಅವರು, ತಾವೇ ಪತ್ರಕರ್ತರನ್ನು ಮಾತಿಗೆಳೆದರು.
ಈ ವೇಳೆ ಕಾರಿನ ಮೇಲಿದ್ದ ಕೆಂಪು ದೀಪದ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ಕಾರು ಕೊಟ್ಟಿದ್ದು ಸರ್ಕಾರ. ನನ್ನದೇನಿದ್ದರೂ ಅದನ್ನು ಬಳಸುವ ಕೆಲಸ ಮಾತ್ರ. ಅಷ್ಟಕ್ಕೂ ಕೇಂದ್ರದ ನಿರ್ಧಾರವನ್ನು ರಾಜ್ಯದ ಮುಖ್ಯಮಂತ್ರಿಗಳು ಒಪ್ಪಿ ನಿರ್ಧಾರ ಕೈಗೊಂಡಿದ್ದರೆ ಸರಿ ಎನ್ನಬಹುದಿತ್ತು. ಕೆಂಪು ದೀಪ ನನ್ನ ತಲೆ ಮೇಲಿಲ್ಲ. ನನ್ನ ಕಾರಿನ ಮೇಲಿದೆ. ತಲೆಯ ಮೇಲಿದ್ದಿದ್ದರೆ ತೆಗೆದುಬಿಡಬಹುದಿತ್ತು ಎಂದು ಹೇಳಿದ್ದಾರೆ.
ರಾಜ್ಯಸರ್ಕಾರ ನಮಗೆ ಕಾರು ಕೊಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಡೆಯಿಂದ ಈ ಬಗ್ಗೆ ಯಾವುದೇ ಆದೇಶಗಳು ಬಂದಿಲ್ಲ. ಆದೇಶ ಬಂದ ನಂತರ ಕೆಂಪು ದೀಪ ತೆಗೆಯುತ್ತೇನೆ.
ಕೇಂದ್ರದ ಈ ನಿರ್ಧಾರ ಎಷ್ಟರಮಟ್ಟಿಗೆ ಬಡವರಿಗೆ ಸಹಾಯವಾಗುತ್ತದೆ?...ಸರ್ಕಾರದ ನಿರ್ಧಾರಗಳು ಬಡವರ ಪರವಾಗಿರಬೇಕು. ಆದರೆ, ಕೇಂದ್ರ ಈ ನಿರ್ಧಾರ ಬಡವರ ಹಸಿವು ನೀಗುವುದಾಗಲೀ, ಲಾಭವಾಗಲೀ ಆಗುವುದಿಲ್ಲ ಎಂದು ತಿಳಿಸಿದ್ದಾರೆ.