ಮಂಡ್ಯ: ವಿಚಾರಣಾಧೀನ ಕೈದಿಯ ಸಾವಿಗೆ ಕಾರಾಗೃಹ ಅಧೀಕ್ಷಕರ ನಿಲಕ್ಷ್ಯವೇ ಕಾರಣ ಎಂದು ಆರೋಪಿಸಿ ಮಂಡ್ಯ ಜೈಲಿನೊಳಗೆ ಕೈದಿಗಳು ಪ್ರತಿಭಟನೆ ನಡೆಸಿದರು.
ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಕೈದಿ ಆನಂದ್ ಸಾವನ್ನಪ್ಪಿದ್ದ. ವರ್ಷದ ಹಿಂದೆ ಪೋಕ್ಸೋ ಕಾಯ್ದೆಯಡಿ ಬಂಧಿಯಾಗಿದ್ದ ಮದ್ದೂರು ತಾಲ್ಲೂಕು ಮಲ್ಲಿಗೆರೆಯ ಆನಂದ್‍ಗೆ ಮಂಗಳವಾರ ಅನಾರೋಗ್ಯ ಕಾಣಿಸಿಕೊಂಡಿತ್ತು. ಆತನನ್ನ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಆನಂದ್ ಅಸುನೀಗಿದ್ದಾನೆ.
ಆನಂದ್ ಸಾವಿಗೆ ಕಾರಾಗೃಹದ ಅಧೀಕ್ಷಕ ಲೋಕೇಶ್ ಅವ್ರೇ ಕಾರಣ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಕೊಡಿಸಿದ್ರೆ ಬದುಕುಳಿಯುತ್ತಿದ್ದ ಅಂತಾ ಆರೋಪಿಸಿ ಜೈಲಿನಲ್ಲಿರೋ ಕೈದಿಗಳು ಪ್ರತಿಭಟಿಸಿದ್ರು. ಇನ್ನೂ ಜೈಲಿನ ಹೊರಗೆ ಆನಂದ್ ಸಂಬಂಧಿಕರು ಕೂಡ ಪ್ರತಿಭಟನೆ ನಡೆಸಿದರು. ತಮ್ಮ ಮಗನಿಗೆ ಪೊಲೀಸರು ಎರಡು ವಾರಗಳ ಹಿಂದೆ ಚೆನ್ನಾಗಿ ಥಳಿಸಿದ್ದರು. ಹೀಗಾಗಿ ಅವನು ಹೊಟ್ಟೆನೋವಿನಿಂದ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿದ್ದಾರೆ.
ಕಳೆದ ಎರಡು ವಾರಗಳಿಂದ ಆನಂದ್ ಗೆ ಪದೇ ಪದೇ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತು. ಕಳೆದ ವಾರದಲ್ಲಿ ಆನಂದ್ ನನ್ನು ಮೂರು ಬಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆತನ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಳ್ಳದೇ ಆನಂದ್ ಸಾವನ್ನಪ್ಪಿದ್ದಾನೆ ಎಂದು ಮಂಡ್ಯ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.