ಬಳ್ಳಾರಿ: ರಾಜ್ಯದಲ್ಲಿ ಬರಗಾಲ. ಮಳೆ ಬಂದು ಕೆರೆ ತುಂಬಿದರೆ ಸಾಕಪ್ಪಾ ಅಂತ ಅದೆಷ್ಟೋ ಗ್ರಾಮಗಳ ಜನರು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದರೆ, ಬಳ್ಳಾಗಿ ಗ್ರಾಮದ ಜನತೆಗೆ ಮಾತ್ರ ದೇವರ ಕೋಪವನ್ನು ಕಡಿಮೆ ಮಾಡಲು ಕೆರೆಯ ನೀರನ್ನೇ ಖಾಲಿ ಮಾಡಿರುವ ವಿಚಿತ್ರ ಘಟನೆ ನಡೆದಿದೆ.
ಕೆರೆಯ ನೀರನ್ನು ಖಾಲಿ ಮಾಡಿದರೆ ಈ ವರ್ಷ ಹೆಚ್ಚು ಮಳೆಯಾಗುತ್ತದೆ ಎಂದು ದೇವವಾಣಿ ಈ ಗ್ರಾಮದ ಕೆಲವು ಯುವಕರಿಗೆ ಹೇಳಿತಂತೆ, ದೇವವಾಣಿಯ ಮಾತನ್ನು ನಂಬಿಕೊಂಡ ಗ್ರಾಮದ ಕೆಲವು ಯುವಕರು ನೀರು ತುಂಬಿದ್ದ ಕೆರೆಯನ್ನು ರಾತ್ರೋ ರಾತ್ರಿ ಖಾಲಿ ಮಾಡಿದ್ದಾರೆ. ನೀರಿನಿಂದ ಭರ್ತಿಯಾಗಿ ನಳಬಳಿಸುತ್ತಿದ್ದ ಕೆರೆ ಮರು ದಿನ ಎದ್ದು ನೋಡಿದರೆ ಖಾಲಿ ಖಾಲಿ. ಕೆರೆಯ ಮಾರ್ಗದಲ್ಲಿ ಓಡಾಡುವ ಪಕ್ಕದ ಗ್ರಾಮದವರಿಗೆ ಅಚ್ಚರಿ.
"ಮೂರು ವರ್ಷಗಳಿಂದ ನೀರು ಭರ್ತಿಯಾಗಿರುವುದಕ್ಕೆ ದೇವರಿಗೆ ಕೋಪ ಬಂದಿತ್ತು. ಆದ್ದರಿಂದ ಮಳೆಯೂ ಬರದಂತಾಗಿತ್ತು. ಇದೇ ವೇಳೆ ತಮಗೆ ಕೆರೆಯ ನೀರನ್ನು ಖಾಲಿ ಮಾಡುವಂತೆ ದೇವ ವಾಣಿ ಆದೇಶ ನೀಡಿತ್ತು". ಎಂದು ಕೆರೆಯ ನೀರನ್ನು ಖಾಲಿ ಮಾಡಿರುವುದರ ಬಗ್ಗೆ ಕೇಳಿದ ಪ್ರಶ್ನೆಗೆ ರಾಮದುರ್ಗಾ ಕೆರೆ ಇರುವ ಕೊಟ್ಟೂರು ತಾಲೂಕಿನ ಗ್ರಾಮದ ಯುವಕರು ಉತ್ತರ ನೀಡಿದ್ದಾರೆ.
ಮಂಗಳವಾರ ರಾತ್ರಿ ಒಡ್ಡು ಗೋಡೆಯನ್ನು ಒಡೆಯುವ ಮೂಲಕ ಕೆರೆ ಭರ್ತಿ ಇದ್ದ ನೀರನ್ನು ಪೋಲು ಮಾಡಿರುವ ಪುಣ್ಯ ಕಾರ್ಯ ಮರುದಿನ ಬೆಳಿಗ್ಗೆ ಗ್ರಾಮಸ್ಥರಿಗೆ ಗೋಚರವಾಗಿದೆ. ರಾಮದುರ್ಗದಲ್ಲಿ ಮಳೆಯ ಕೊರತೆ ಇತ್ತಾದರೂ ಈ ಕೆರೆಯಲ್ಲಿ ಮಾತ್ರ ನೀರಿಗೆ ಯಾವುದೇ ರೀತಿಯ ಕೊರತೆ ಇರಲಿಲ್ಲ. ಸಂಗ್ರಹಿಸಿಟ್ಟಿದ್ದ ಕೆರೆಯ ನೀರನ್ನು ಎಂದಿಗೂ ಸಹ ನೀರಾವರಿ ಚಟುವಟಿಕೆಗೆ ಬಳಕೆ ಮಾಡಿರಲಿಲ್ಲ. ಅಷ್ಟೇ ಅಲ್ಲದೇ ಎರಡು ವಾರಗಳ ಹಿಂದೆ ಮಳೆ ಬಂದಿದ್ದರಿಂದ ನೀರಿನ ಮಟ್ಟವೂ ಏರಿಕೆಯಾಗಿತ್ತು.
ಕೆರೆ ನೀರನ್ನು ಖಾಲಿ ಮಾಡಿರುವ ಹಿಂದೆ ಮೀನುಗಾರರ ಕೈವಾಡವೂ ಇದೆ ಎಂದು ಕೆಲವು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದು, ಹೆಚ್ಚು ಮೀನುಗಳನ್ನು ಹಿಡಿಯಲು ನೀರನ್ನು ಖಾಲಿ ಮಾಡಿಸಿರುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಬರಿದಾಗಿರುವ ಕೆರೆ ಇರುವ ಸ್ಥಳಕ್ಕೆ ಜಿಲ್ಲಾಡಳಿತದ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಇನ್ನು ಮುಂದೆ ಈ ರೀತಿ ನೀರನ್ನು ಪೋಲು ಮಾಡದಂತೆ ಗ್ರಾಮಸ್ಥರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos