ತುಮಕೂರು ಸಮೀಪ ಹಳ್ಳಿಯಲ್ಲಿ ಗ್ರಾಮಸ್ಥರು ಮಲ್ಲೇಗೌಡರ ಮೃತದೇಹವನ್ನು ಹೊರತೆಗೆಯುತ್ತಿರುವುದು.
ತುಮಕೂರು: ವರುಣ ದೇವರನ್ನು ಸಂತೃಪ್ತಿಪಡಿಸಲು ಧಾರ್ಮಿಕ ಕ್ರಿಯೆಯ ಅಂಗವಾಗಿ ಮನುಷ್ಯನ ಅಸ್ಥಿಪಂಜರ ಹೊರತೆಗೆದು ತಲೆಬುರುಡೆ ಸುಟ್ಟುಹಾಕಿದ ಘಟನೆ ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಆನೆಕಟ್ಟೆ ಗ್ರಾಮದಲ್ಲಿ ನಡೆದಿದೆ.
ಮೂರು ದಿನಗಳ ಹಿಂದೆಯೇ ಈ ಘಟನೆ ನಡೆದಿದ್ದು ನಿನ್ನೆ ಬೆಳಕಿಗೆ ಬಂದಿದೆ. ಆನೆಕಟ್ಟೆ ಬಾಯ್ಸ್ ವಾಟ್ಸಾಪ್ ಗ್ರೂಪ್ ನಲ್ಲಿ ಈ ವಿಡಿಯೋ ನಿನ್ನೆ ಹರಿದಾಡುತ್ತಿತ್ತು.ಗ್ರಾಮದ ದೇವಸ್ಥಾನದ ಮುಖ್ಯಸ್ಥ ಮಲ್ಲೆ ಗೌಡ (70 ವರ್ಷ)ರ ಅಸ್ಥಿಪಂಜರವನ್ನು ಗ್ರಾಮಸ್ಥರು ಹೊರತೆಗೆದು ಸುಟ್ಟುಹಾಕಿದ್ದಾರೆ. ಇವರು ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದರು.
ಈ ಗ್ರಾಮದ ಜನತೆ ಬರಗಾಲದಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದ ನೊಂದ ಜನರು ಜ್ಯೋತಿಷಿ ಬಳಿ ಹೋಗಿ ಕೇಳಿದಾಗ, ಬಿಳಿ ತೊನ್ನಿನ ವ್ಯಕ್ತಿಯೊಬ್ಬರ ಶವವನ್ನು ಸುಡುವ ಬದಲು ಹೂತಿದ್ದರಿಂದ ವರುಣ ದೇವರಿಗೆ ಸಿಟ್ಟು ಬಂದಿದೆ ಎಂದು ಹೇಳಿದರು.
ಮಲ್ಲೆಗೌಡರ ಮಕ್ಕಳು ಆ ಗ್ರಾಮದಲ್ಲಿ ವಾಸಿಸುತ್ತಿಲ್ಲವಾದ್ದರಿಂದ ಗ್ರಾಮಸ್ಥರು ಅವರ ಸಂಬಂಧಿಕರ ಅನುಮತಿ ಪಡೆದು ಸಮಾಧಿಯನ್ನು ಅಗೆದರು.
ತಲೆಬುರುಡೆಗೆ ಉಪ್ಪು ಹಾಕಿ 3 ದಿನಗಳ ಕಾಲ ಸುಟ್ಟರು. ಅಲ್ಲದೆ ಗ್ರಾಮಸ್ಥರು ಬಸವಣ್ಣಗುಡಿ ದೇವಸ್ಥಾನದಲ್ಲಿ ಹವನ ಮತ್ತು ಇತರ ಧಾರ್ಮಿಕ ಕ್ರಿಯೆಗಳನ್ನು ಕೈಗೊಂಡರು.
ಆಸಕ್ತಿಕರ ವಿಷಯವೆಂದರೆ ಗ್ರಾಮಸ್ಥರ ಗುಂಪು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಸಮೀಪ ಕಿಗ್ಗಾ ಹತ್ತಿರ ಋಶ್ಯಶೃಂಗ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಇದು ಮಳೆ ದೇವರಿಗೆ ಸಂಬಂಧಪಟ್ಟ ದೇವಸ್ಥಾನವಾಗಿದ್ದು ಗ್ರಾಮಕ್ಕೆ ಪವಿತ್ರ ನೀರನ್ನು ಅಲ್ಲಿಂದ ತಂದಿದ್ದಾರೆ. ಆ ನೀರನ್ನು ಗ್ರಾಮದಲ್ಲಿ ಬರಡಾದ ನೆಲಕ್ಕೆ ಚೆಲ್ಲಿದರೆ ಚೆನ್ನಾಗಿ ಮಳೆ ಸುರಿಯುತ್ತದೆ ಎಂಬ ನಂಬಿಕೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ತಹಶೀಲ್ದಾರ್ ಆರ್.ಗಣೇಶ್, ಈ ಕಾರ್ಯದಲ್ಲಿ ಭಾಗಿಯಾದ ಗ್ರಾಮಸ್ಥರನ್ನು ಕರೆದು ಭವಿಷ್ಯದಲ್ಲಿ ಇಂತಹ ಧಾರ್ಮಿಕ ಕಾರ್ಯಗಳನ್ನು ನಡೆಸದಂತೆ ಸಲಹೆ ನೀಡಿದ್ದೇನೆ ಎಂದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos