ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಕಂಡುಬಂದ ದೃಶ್ಯ
ಬೆಂಗಳೂರು: ನಿನ್ನೆ ರಾತ್ರಿ ಬೆಂಗಳೂರು ನಗರದಾದ್ಯಂತ ಸುರಿದ ಗುಡುಗು-ಮಿಂಚು, ಗಾಳಿ ಸಹಿತ ಧಾರಾಕಾರ ಮಳೆ ಪ್ರಯಾಣಿಕರನ್ನು ಹೈರಾಣಾಗಿಸಿತ್ತು. ಬೆಂಗಳೂರಿನ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ನಾಲ್ಕೂ ಕಡೆಗಳಲ್ಲಿ ಅಲ್ಲಲ್ಲಿ ರಸ್ತೆ ತುಂಬ ನೀರು ಹರಿದು ವಾಹನ ಸಂಚಾರಕ್ಕೆ ಭಾರೀ ಅಡ್ಡಿಯನ್ನುಂಟುಮಾಡಿತ್ತು.
ಅಲ್ಲಲ್ಲಿ ಮರದ ರೆಂಬೆ, ಕೊಂಬೆಗಳು ಮುರಿದು ಬಿದ್ದು ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನ ಸವಾರರಿಗೆ ಮನೆಗೆ ಸುರಕ್ಷಿತವಾಗಿ ಹೇಗೆ ತಲುಪುವುದೆಂದೇ ಚಿಂತೆಯಾಗಿತ್ತು. ಸದಾಶಿವನಗರದಿಂದ ಮಲ್ಲೇಶ್ವರಂಗೆ ತೆರಳುವ ಮಾರ್ಗ ಮಧ್ಯೆಯೇ ಮರದ ದೊಡ್ಡ ಕೊಂಬೆ ಕಾರಿನ ಮೇಲೆ ಬಿದ್ದು ಸಂಪೂರ್ಣ ಜಖಂಗೊಂಡಿದೆ. ಅಲ್ಲಲ್ಲಿ ದ್ವಿಚಕ್ರ ವಾಹನಗಳ ಮೇಲೆ ಸಹ ಮರದ ರೆಂಬೆ ಮುರಿದು ಬಿದ್ದ ವರದಿಯಾಗಿವೆ.
ಬೆಂಗಳೂರು ಉತ್ತರ ರಾಧಾಕೃಷ್ಣ ದೇವಸ್ಥಾನ ವಾರ್ಡ್ ನಲ್ಲಿ 65 ಮಿಲಿ ಮೀಟರ್ ದಾಖಲೆಯ ಮಳೆಯಾಗಿದೆ. ಆವಲಹಳ್ಳಿಯಲ್ಲಿ 35 ಮಿಲಿ ಮೀಟರ್, ಹೂಡಿ 31.5 ಮಿ.ಮೀ, ಮನೊರಾಯನಪಾಳ್ಯ(32 ಮಿಲಿ ಮೀಟರ್), ಕೊಡಿಗೆಹಳ್ಳಿ(29 ಮಿಲಿ ಮೀಟರ್), ವಿದ್ಯಾರಣ್ಯಪುರ(22 ಮಿಲಿ ಮೀಟರ್), ಯಲಹಂಕ(13.5 ಮಿಲಿ ಮೀಟರ್) ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ಸಹಾಯವಾಣಿ ವರುಣ ಮಿತ್ರ ತಿಳಿಸಿದೆ.
ನಗರದಾದ್ಯಂತ 20ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಕಾವೇರಿ ಜಂಕ್ಷನ್ ನಿಂದ ಹೆಬ್ಬಾಳದವರೆಗೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಅತ್ಯಂತ ಸಂಚಾರ ದಟ್ಟಣೆ ಕಂಡುಬಂತು. ಲಾಲಾ ಬಾಗ್ ವೆಸ್ಟ್ ಗೇಟ್ ಬಳಿ ಅನೇಕ ಮರಗಳು ಧರೆಗೆ ಬಿದ್ದಿವೆ. ಅಂಡರ್ ಪಾಸ್ ನಲ್ಲಿ ಬೆಂಜ್ ಕಾರು ನೀರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದು ಬಿಬಿಎಂಪಿ ಸಿಬ್ಬಂದಿ ಇನ್ನೂ ರಕ್ಷಣೆಗೆ ಧಾವಿಸಿಲ್ಲ.
ಬೆಂಗಳೂರಿನ ರಾಜಕಾಲುವೆಯಲ್ಲಿ ಶಾಂತಕುಮಾರ್ ಎನ್ನುವ ಕಾರ್ಮಿಕರೊಬ್ಬರು ಕೊಚ್ಚಿ ಹೋಗಿದ್ದು ಇನ್ನೂ ಸಿಕ್ಕಿಲ್ಲ. ಶಾಂತಕುಮಾರ್ ಗೆ ಪತ್ನಿ 3 ವರ್ಷದ ಬಾಲಕ ಸೇರಿದಂತೆ 3 ತಿಂಗಳ ಮಗುವಿದೆ.
ಆರ್.ಟಿ.ನಗರ, ಮಲ್ಲೇಶ್ವರಂ, ಹಂಪಿ ನಗರ, ಹೆಬ್ಬಾಳ, ರಾಜಕುಮಾರ್ ರಸ್ತೆ, ಸದಾಶಿವನಗರ ಮತ್ತು ಇನ್ನೂ ಅನೇಕ ಕಡೆಗಳಿಂದ ಮರಗಳು ಧರೆಗುರುಳಿದ ದೂರುಗಳು ಬಂದಿವೆ. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಜನಜೀವನ, ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು ಎಂದು ಬಿಬಿಎಂಪಿ ನಿಯಂತ್ರಣಾ ಕೊಠಡಿ ಸಿಬ್ಬಂದಿ ತಿಳಿಸಿದ್ದಾರೆ. ಆದರೆ ದಕ್ಷಿಣ ಬೆಂಗಳೂರಿನಲ್ಲಿ ಮಾತ್ರ ಕನಿಷ್ಠ 1 ಮಿಲಿ ಮೀಟರ್ ಮಳೆಯಾಗಿದೆ.
ಭಾರತೀಯ ಹವಾಮಾನ ಇಲಾಖೆಯ ವರದಿ ಪ್ರಕಾರ, ಇಂದು ಭಾನುವಾರ ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಇರಲಿದೆ. ಇಂದು ಸಂಜೆ ಮೋಡ ಕವಿದ ವಾತಾವರಣವಿರಲಿದ್ದು ರಾತ್ರಿ ಗುಡುಗು ಸಹಿತ ಮಳೆ ಸುರಿಯುವ ಸಾಧ್ಯತೆಯಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics