ಬೆಂಗಳೂರು: ಕರ್ನಾಟಕ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಹೊಸದಾಗಿ ಆಯ್ಕೆಯಾದ ಅಭ್ಯರ್ಥಿಗಳು ಕಳೆದ ಎರಡುವರೆ ವರ್ಷಗಳಿಂದ ಸರ್ಕಾರದ ನೇಮಕಾತಿ ಆದೇಶಕ್ಕಾಗಿ ಕಾಯುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷ ಆರಂಭವಾಗುವ ಮುನ್ನವೇ ಸರ್ಕಾರ ನೇಮಕಾತಿ ಆದೇಶ ನೀಡಬೇಕು ಎಂದು ಕರ್ನಾಟಕ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಹೋರಾಟ ಸಮಿತಿ ಆಗ್ರಹಿಸಿದೆ.
2015ರ ಜನವರಿಯಲ್ಲಿ ಆರಂಭವಾದ ಪ್ರಕ್ರಿಯೆ 2017 ಮೇ ಅಂತ್ಯವಾದರೂ ಮುಗಿಯುತ್ತಿಲ್ಲ. ಅಂತಿಮ ಪಟ್ಟಿಯಲ್ಲಿ ಆಯ್ಕೆಯಾಗಿರುವ 2,034 ಅಭ್ಯರ್ಥಿಗಳು ವೈದ್ಯಕೀಯ ಪರೀಕ್ಷೆ ಮತ್ತು ಪೊಲೀಸ್ ಪರಿಶೀಲನೆ ಬಹುತೇಕ ಮುಗಿದಿದ್ದರೂ ಇದುವರೆಗೆ ಕೌನ್ಸಿಲಿಂಗ್ ದಿನಾಂಕ ಪ್ರಕಟಿಸಿಲ್ಲ.
ಇನ್ನು ಕೇವಲ 1427 ಅಭ್ಯರ್ಥಿಗಳಿಗೆ ಮಾತ್ರ ಸಿಂಧುತ್ವದ ಅವಶ್ಯಕತೆ ಇದ್ದು, ಈಗಾಗಲೇ ಬಹಳಷ್ಟು ಅಭ್ಯರ್ಥಿಗಳ ಸಿಂಧುತ್ವ ಪ್ರಕ್ರಿಯೆಯೂ ಮುಗಿದಿದೆ. ಆದರೆ ಕೆಲವೇ ಕೆಲವು ಅಭ್ಯರ್ಥಿಗಳು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಿರಾಸಕ್ತರಾಗಿದ್ದು, ಇಂತಹ ಅಭ್ಯರ್ಥಿಗಳಿಗಾಗಿ ಸುಮಾರು ಎರಡುವರೆ ವರ್ಷಗಳಿಂದ ಉದ್ಯೋಗಕ್ಕಾಗಿ ಕಾಯುತ್ತಿರುವ ಸಾವಿರಾರು ಅಭ್ಯರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಈ ಕೂಡಲೇ ಸರ್ಕಾರ ಕೌನ್ಸಿಲಿಂಗ್ ನಡೆಸಿ ನೇಮಕಾತಿ ಆದೇಶ ನೀಡಬೇಕು ಎಂದು ಕರ್ನಾಟಕ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಹೋರಾಟ ಸಮಿತಿಯ ಕಾರ್ಯದರ್ಶಿ ಸತೀಶ್ ಅವರು ಒತ್ತಾಯಿಸಿದ್ದಾರೆ.
ಜೂನ್ ಮೊದಲ ವಾರದಲ್ಲಿ ಆದೇಶ ನೀಡುವುದಾಗಿ ರಾಜ್ಯ ಸರ್ಕಾರ ಹೇಳಿತ್ತು. ಆದರೆ ಇದುವರೆಗೂ ಕೌನ್ಸಲಿಂಗ್ ವೇಳಾಪಟ್ಟಿಯನ್ನು ಪ್ರಕಟಿಸಿಲ್ಲ. ಜೂನ್ ನಂತರ ನಿಯೋಜಿಸಿದ ಸ್ಥಳಕ್ಕೆ ಹೋದರೆ ಮಕ್ಕಳ ವಿದ್ಯಾಭಾಸ್ಯಕ್ಕೆ ಅಡಚಣೆಯಾಗುತ್ತದೆ ಎಂದು ಸತೀಶ್ ಹೇಳಿದ್ದಾರೆ.
2015ರ ಜನವರಿಯಲ್ಲಿ 2,160 ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಈ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾರ್ಚ್ 2016ರಲ್ಲಿ ಪರೀಕ್ಷೆ ನಡೆಸಿತ್ತು. ಪ್ರಮಾಣ ಪತ್ರಗಳ ಪರಿಶೀಲನೆ ಬಳಿಕ ಅಕ್ಟೋಬರ್ 2016ರಲ್ಲಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿತ್ತು. ಹೀಗಾಗಿ 2017-2018ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ನೇಮಕಾತಿ ಆದೇಶ ಸಿಗುವ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಗೆ ಸರ್ಕಾರ ಇನ್ನೂ ಆದೇಶ ನೀಡದಿರುವುದು ತೀವ್ರ ಆತಂಕ ಸೃಷ್ಟಿಸಿದೆ.