ಕೇವಲ 2.5 ಲಕ್ಷಕ್ಕೆ ಕ್ರೇನ್, ಖನನ ಸಾಧನ ತಯಾರಿಸಿದ ಲ್ಯಾಬ್ ತಂತ್ರಜ್ಞ!
ಬೆಳಗಾವಿ: ರೈತರು ಮನಸ್ಸು ಮಾಡಿದರೆ ಅದ್ಭುತ ಸಾಧನೆಗಳು ನಡೆಯುತ್ತವೆ ಎಂಬುದಕ್ಕೆ ಇಲ್ಲೊಂದು ನಿದರ್ಶನವಿದೆ. ವೃತ್ತಿಯಲ್ಲಿ ಲ್ಯಾಬ್ ತಂತ್ರಜ್ಞರಾಗಿರುವ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕೃಷಿಕ ಮನೆತನದ ಗಿರೀಶ್ ಬಸಪ್ಪ ದೊಡ್ಡಗೌಡರ್ ಕೇವಲ 2.5 ಲಕ್ಷಕ್ಕೆ ಕ್ರೇನ್, ಖನನ ಸಾಧನ ತಯಾರಿಸಿದ್ದಾರೆ.
ಅಮ್ಮನಗಿ ಗ್ರಾಮದವರಾಗಿರುವ ಗಿರೀಶ್ ಬಸಪ್ಪ ತಾವು 2.5 ಲಕ್ಷಕ್ಕೆ ಕ್ರೇನ್ ಹಾಗೂ ಖನನ ಸಾಧನ ತಯಾರಿಸಲು ಕಾರಣವಾದ ಘಟನೆಯನ್ನು ಹೀಗೆ ವಿವರಿಸುತ್ತಾರೆ. "ನೀರಿನ ಕೊರತೆಯಿಂದ ಕೃಷಿ ಚಟುವಟಿಕೆ ನಡೆಸಲು ಸಾಧ್ಯವಾಗದೇ ನಮ್ಮ ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು. ಇದ್ದ ಒಂದೇ ಒಂದು ಪರಿಹಾರವೆಂದರೆ ಬಾವಿ ತೋಡಿಸುವುದು. ಆದರೆ ಆ ಕಾಮಗಾರಿಗೆ 7-8 ಲಕ್ಷ ಖರ್ಚಾಗುತ್ತಿತ್ತು. ಅಷ್ಟೊಂದು ಹಣ ಒಂದೇ ಬಾರಿಗೆ ಖರ್ಚು ಮಾಡಲು ಸಾಧ್ಯವಾಗದ ಕಾರಣ ಕೃಷಿ ಚಟುವಟಿಕೆ ಮತ್ತಷ್ಟು ಕಡಿಮೆಯಾಗಿತ್ತು. ಆಗಲೇ ನನಗೆ ಬಾವಿ ತೋಡಲು ನೆರವಾಗುವ ಕ್ರೇನ್ ಹಾಗೂ ಖನನ(ಅಗೆಯುವ) ಸಾಧನ ತಯಾರಿಸುವ ಆಲೋಚನೆ ಬಂದಿದ್ದು."
" ಸ್ವಂತವಾಗಿ ಸಾಧನ ತಯಾರಿಸಲು ಚಿಂತನೆ ನಡೆಸಿ, ಯಂತ್ರಗಳ ಕಾರ್ಯನಿರ್ವಹಣೆ ಬಗ್ಗೆ ಅಧ್ಯಯನ ನಡೆಸಿದೆ. ಕ್ರೇನ್ ಗೆ ಅಗತ್ಯವಿರುವ ಹೈಡ್ರಾಲಿಕ್ ಸಾಧನ ಸೇರಿದಂತೆ ಹಲವು ಸಾಧನಗಳನ್ನು ಖರೀದಿಸಿ ಕೇವಲ 2.5 ಲಕ್ಷದಲ್ಲಿ ಕ್ರೇನ್ ಹಾಗೂ ಖನನ ಸಾಧನವನ್ನು ತಯಾರಿಸಿದೆ" ಎಂದು ಗಿರೀಶ್ ಬಸಪ್ಪ ದೊಡ್ಡಗೌಡರ್ ಹೇಳಿದ್ದಾರೆ.
ತಾವೇ ಖರೀದಿಸಿದ್ದ ಬಿಡಿ ಭಾಗಗಳಿಂದ ಕ್ರೇನ್ ಹಾಗೂ ಅರ್ತ್ ಮೋವರ್ ನ್ನು ಜೋಡಿಸಿ ಎರಡು ವರ್ಷಗಳಲ್ಲಿ ಈ ಸಾಧನಗಳನ್ನು ತಯಾರಿಸಿ ಬಾವಿ ತೋಡುವ ಕಾಮಗಾರಿಯನ್ನು ಪ್ರಾರಂಭಿಸಿದ್ದಾರೆ. ಗಿರೀಶ್ ತಯಾರಿಸಿರುವ ಸಾಧನದಿಂದ ನೆಲ ಉಳುವ ಕೆಲಸವನ್ನೂ ಮಾಡಬಹುದಾಗಿದೆಯಂತೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos