ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಯೂರಿದ್ದ ಮೂವರು ಪಾಕಿಸ್ತಾನ ಮೂಲದ ಪ್ರಜೆಗಳು ಆಧಾರ್ ಕಾರ್ಡ್ ಪಡೆಯಲು ಸರ್ಕಾರಿ ಆಸ್ಪತ್ರೆಯ ಅಧಿಕಾರಿಯೊಬ್ಬರು ಸಹಾಯ ಮಾಡಿದ್ದರು ಎಂಬ ವಿಚಾರ ಇದೀಗ ಬೆಳಕಿದೆ ಬಂದಿದೆ.
ಜಯನಗರ ಸರ್ಕಾರಿ ಆಸ್ಪತ್ರೆಯ ಹಿರಿಯ ವೈದ್ಯೆಯಾಗಿರುವ ಡಾ.ಸಿ.ಎಸ್.ನಾಗಲಕ್ಷ್ಮಿ ಎಂಬುವವರನ್ನು ಬೆಂಗಳೂರಿನ ಬನಶಂಕರಿ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ವೈದ್ಯೆ ನಾಗಲಕ್ಷ್ಮಮ್ಮ ಅವರನ್ನು ಬಂಧನಕ್ಕೊಳಪಡಿಸಿದ್ದ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ 2 ದಿನಗಳ ಕಾಲ ವಶಕ್ಕೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಕೆ.ಎಸ್.ಲೇಔಟ್ ನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಕೇರಳ ಮೂಲದ ಮಹಮದ್ ಸಿಹಾಬ್, ಈತನ ಪತ್ನಿ ಪಾಕಿಸ್ತಾನದ ಸಮೀರಾ ಅಲಿಯಾಸ್ ನಜ್ಮಾ, ಸಂಬಂಧಿ ಮಹಮದ್ ಖಾಸಿಫ್ ಹಾಗೂ ಈತನ ಪತ್ನಿ ಝೈನಾಬ್ ಅಲಿಯಾಸ್ ಕಿರಣ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಈ ವೇಳೆ ಪಾಕ್ ಪ್ರಜೆಗಳ ಬಳಿ ಆಧಾರ್ ಕಾರ್ಡ್ ಪತ್ತೆಯಾಗಿದ್ದವು.
ಆರೋಪಿ ಮಹಮದ್ ಸಿಹಾಬ್ ವಿಚಾರಣೆ ನಡೆಸಿದಾಗ ಜಯನಗರದ ಸರ್ಕಾರಿ ಆಸ್ಪತ್ರೆ ಹಿರಿಯ ವೈದ್ಯೆ ಸಿ.ಎಸ್.ನಾಗಲಕ್ಷ್ಮಮ್ಮ ಅವರಿಂದ ಪ್ರಮಾಣ ಪತ್ರ ಪಡೆದು ಆಧಾರ್ ಕಾರ್ಡ್ ಪಡೆದಿರುವುದು ಬೆಳಿಕಿಗೆ ಬಂದಿತ್ತು. ಹಣ ಪಡೆದು ನಾಗಲಕ್ಷ್ಮಿ ಅವರು ಪೇಪರ್ ಗಳಿಗೆ ಸಹಿ ಮಾಡಿದ್ದರು ಎಂದು ಸಿಹಾಬ್ ಹೇಳಿಕೊಂಡಿದ್ದ.
ಪ್ರಕರಣ ಸಂಬಂಧ ನಾಗಲಕ್ಷ್ಮಿ ಅವರು ಪ್ರತಿಕ್ರಿಯೆ ನೀಡಿದ್ದು, ಮೂರು ಹಿಂದಶ ಹಿಂದೆ ಶಾಹಿಬ್ ನನ್ನೊಂದಿಗೆ ಮಾತನಾಡಿದ್ದ. ಆಧಾರ್ ಕಾರ್ಡ್ ಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುವಂತೆ ಮನವಿ ಮಾಡಿದ್ದ. ಆದರೆ, ಅವರು ಪಾಕಿಸ್ತಾನದ ಪ್ರಜೆಗಳಾಗಿದ್ದರು ಎಂಬುದು ನನಗೂ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.