ರಾಜ್ಯ

ದೆಹಲಿ: ಪ್ರಧಾನಿ ಭೇಟಿ ಮಾಡಲು ಹೋದ ಗುಡಿಬಂಡೆ ಮಹಿಳೆ: ಸಿಎಂ ಸಿದ್ದರಾಮಯ್ಯ ಭೇಟಿಯಾಗಲು ಯಶಸ್ವಿ!

Shilpa D
ಬೆಂಗಳೂರು: ಮಹಿಳೆಯೊಬ್ಬರು ತಮ್ಮ ಒಂದು ಸಣ್ಣ ಸಮಸ್ಯೆ ಪರಿಹಾರಕ್ಕಾಗಿ ದೆಹಲಿಯಲ್ಲಿ ಪ್ರಧಾನಿ ಅವರನ್ನು ಭೇಟಿ ಮಾಡಲು ಹೋಗಿ ನಂತರ  ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಗ್ರಾಮದ ಮುನಿಯಮ್ಮ ಎಂಬವರು ತಮ್ಮ ಸಮಸ್ಯೆಯನ್ನು ಇಟ್ಟುಕೊಂಡು ದೆಹಲಿಗೆ ತೆರಳಿದ್ದರು. ಮುನಿಯಮ್ಮ ಅವರಿಗೆ ಸರ್ಕಾರ ವಿವಾದಿತ ಭೂಮಿಯನ್ನು ಮಂಜೂರು ಮಾಡಿತ್ತು. ಇದ್ದರಿಂದ ಬೇಸತ್ತಿದ್ದ ಮುನಿಯಮ್ಮ ಸಾಕಷ್ಟು ಬಾರಿ ಸಮಸ್ಯೆಯನ್ನು ಬಗೆಹರಿಸುವಂತೆ ಸಿಎಂ ಬಳಿ ಹೋಗಲು ಪ್ರಯತ್ನ ಪಟ್ಟಿದ್ರು. ಆದರೆ ಸಿಎಂ ಮಾತ್ರ ಸಿಕ್ಕಿರಲಿಲ್ಲ. ಬೆಂಗಳೂರಿನಲ್ಲಿ ಸದಾ ಬ್ಯುಸಿಯಾಗಿರುತ್ತಿದ್ದ ಸಿಎಂ ಅವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. 
ನಂತರ ದೆಹಲಿಯ ಕರ್ನಾಟಕ ಭವನಕ್ಕೆ ಭಾನುವಾರ ಸಂಜೆ ತೆರಳಿದ್ದ ಮುನಿಯಮ್ಮಗೆ ಅಲ್ಲಿನ ಸಿಬ್ಬಂದಿ ಉಳಿಯಲು ಅವಕಾಶ ಮಾಡಿಕೊಟ್ಟು ಊಟದ ವ್ಯವಸ್ಥೆ ಮಾಡಿದ್ದಾರೆ. ಸೋಮವಾರ ಬೆಳಗ್ಗೆ ಹೈಕಮಾಂಡ್ ಭೇಟಿ ಮಾಡಲು ತೆರಳುತ್ತಿದ್ದ ಸಿದ್ದರಾಮಯ್ಯ ಅವರನ್ನು ಮುನಿಯಮ್ಮ ಭೇಟಿ ಮಾಡಿದ್ದಾರೆ. ಭೂ ಸ್ವಾಧೀನದ ವೇಳೆ ನೀಡಲಾಗಿದ್ದ ಬದಲಿ ಭೂಮಿಯು ವಿವಾದದಲ್ಲಿದ್ದು, ಭೂ ವಿವಾದವನ್ನು ಇತ್ಯರ್ಥಪಡಿಸುವಂತೆ ಸಿಎಂಗೆ ಮನವಿ ಮಾಡಿದರು. ಈ ಹಿಂದೆಯೇ ಭೇಟಿ ಮಾಡಿ ಮನವಿ ಮಾಡುವ ಪ್ರಯತ್ನ ನಡೆಸಿದರೂ ಸಾಧ್ಯವಾಗಲಿಲ್ಲ ಎಂದು ಮಹಿಳೆ ತನ್ನ ಅಳಲು ಹೇಳಿಕೊಂಡರು. 
ನೀವು ಕರ್ನಾಟಕ ಭವನಕ್ಕೆ ಬರುವ ಮುನ್ನವೇ ಬಂದು ನಿಮಗಾಗಿ ಕಾದು ನಿಂತು ಅರ್ಜಿ ನೀಡುತ್ತಿದ್ದೇನೆ. ನನ್ನ ಸಮಸ್ಯೆಯನ್ನು ಪರಿಹರಿಸಿ ಭೂ ವಿವಾದವನ್ನು ಇತ್ಯರ್ಥಪಡಿಸಿ ಎಂದು ಮನವಿ ಮಾಡಿದರು. 
ಮಹಿಳೆಯು ಅರ್ಜಿ ನೀಡಲು ಇಷ್ಟು ಕಷ್ಟಪಟ್ಟಿದ್ದನ್ನು ಕಂಡ ಸಿಎಂ ಸಿದ್ದರಾಮಯ್ಯ ಕಣ್ಣಾಲಿಗಳು ಕೂಡ ಒದ್ದೆಯಾದವು. ಕಣ್ಣನ್ನು ಒರೆಸಿಕೊಳ್ಳುತ್ತಲೇ ಸಿಎಂ ಸಿದ್ದರಾಮಯ್ಯ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ದೀಪ್ತಿ ಅವರಿಗೆ ಕರೆ ಮಾಡಿ ಮುನಿಯಮ್ಮ ಅವರ ಭೂ ವಿವಾದವನ್ನು ಪರಿಹರಿಸುವಂತೆ ಸೂಚನೆ ನೀಡಿದರು. ಸಿಎಂ ಮಾತು ಕೇಳಿ ಅಜ್ಜಿಯ ಕಣ್ಣಲ್ಲಿ ನೀರು ಹರಿದು ಬಂತು
ಮುನಿಯಮ್ಮ ಅವರಿಗೆ ಉಪಹಾರ, ಊಟದ ವ್ಯವಸ್ಥೆಯನ್ನು ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಸಿಎಂ ತಮ್ಮ ಪರ್ಸ್ ತೆಗೆದು ಊರಿಗೆ ಹಿಂದಿರುಗಲು ಹಣ ನೀಡಿ ಕಳುಹಿಸಿದರು.
SCROLL FOR NEXT