ಆತ್ಮಹತ್ಯೆಗೆ ಯತ್ನಿಸಿದ ಪಾಲಿಕೆ ಸದಸ್ಯೆಯರು
ಬೆಂಗಳೂರು: ರಾಜರಾಜೇಶ್ವರಿನಗರದ ಶಾಸಕ ಹಾಗೂ ಅವರ ಬೆಂಬಲಿಗರು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಪಾಲಿಕೆಯ ಮೂವರು ಸದಸ್ಯೆಯರು ಕೌನ್ಸಿಲ್ ಸಭೆಯಲ್ಲೇ ಸೋಮವಾರ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದರು.
ಶಾಸಕರ ಹಾಗೂ ಪಾಲಿಕೆ ಸದಸ್ಯೆಯರ ನಡುವಿನ ವೈಮನಸ್ಯದ ವಿಚಾರ ಇಡೀ ಸಭೆಯನ್ನು ನುಂಗಿತು.
ಬೆಳಿಗ್ಗೆ 11.30ಕ್ಕೆ ಸಭೆ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಮಂಜುಳಾ ನಾರಾಯಣಸ್ವಾಮಿ, ಲಗ್ಗೆರೆಯಲ್ಲಿ ಮೇ 19ರಂದು ಶಂಕುಸ್ಥಾಪನೆ ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರಮ ಮುಗಿದ ಬಳಿಕ ಶಾಸಕರ ಬೆಂಬಲಿಗರು ನಡು ರಸ್ತೆಯಲ್ಲೇ ನನ್ನ ಮೇಲೆ ದೌರ್ಜನ್ಯ ನಡೆಸಿದ್ದರು ಎಂದು ಆರೋಪಿಸಿದರು.
ವಿಧಾನ ಪರಿಷತ್‌ನ ಸದಸ್ಯ ಟಿ.ಎ. ಶರವಣ, ಕಾರ್ಯಕ್ರಮದಲ್ಲಿ ಮೇಯರ್ ಇದ್ದಾಗಲೇ ಈ ದೌರ್ಜನ್ಯ ನಡೆದಿದೆ ಆದರೂ ಯಾವುದೇ ಶಿಸ್ತು ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದರು.
ಆಗಸ್ಟ್ 15 ರಂದು ನನ್ನ ಮೇಲೆ ಹಲ್ಲೆ ನಡೆದಿತ್ತು, ಆದರೂ ಇದುವರೆಗೂ ಕ್ರಮ ಕೈಗೊಂಡಿಲ್ಲ ಎಂದು ಮಮತಾ ಆರೋಪಿಸಿದ್ದಾರೆ.ಕಳೆದ ಆರು ತಿಂಗಳಿಂದ ಎಇಇ ಯನ್ನು ನಾನು ನೋಡಿಲ್ಲ, ಈ ಸಂಬಂಧ ಆಯಕ್ತರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ, ಪೊಲೀಸರು ಕೂಡ ಅಧಿಕಾರಿಗಳಂತೆ ವರ್ತಿಸುತ್ತಾರೆ ಎಂದು ಪಾಲಿಕೆ ಸದಸ್ಯೆ ಮಮತಾ ದೂರಿದರು.
ಮಧ್ಯಾಹ್ನ 1.25ಕ್ಕೆ ಸಭೆ ಮತ್ತೆ ಆರಂಭವಾಯಿತು. ಸದಸ್ಯೆಯರು ಧರಣಿ ಮುಂದುವರಿಸಿದರು. ಶಾಸಕ ಸತೀಶ್ ರೆಡ್ಡಿ, ‘ಪಾಲಿಕೆ ಸದಸ್ಯರಿಗೆ ಸಹಕಾರ ನೀಡದ ಅಧಿಕಾರಿಗಳಿಗೆ ಬರೆ ಹಾಕಿ. ಆಗ ಎಲ್ಲ ಸರಿಯಾಗುತ್ತದೆ’ ಎಂದರು
ರಾಜರಾಜೇಶ್ವರಿನಗರಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಯಾರೂ ಇಲ್ಲಿಲ್ಲ ಎಂದು ಮೇಯರ್ ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ಮೂವರು ಸದಸ್ಯೆಯರು ಫಿನಾಯಿಲ್ ಕುಡಿಯಲು ಯತ್ನಿಸಿದರು. ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಹಾಗೂ ಕಾಂಗ್ರೆಸ್ ಸದಸ್ಯ ಆರ್.ಎಸ್. ಸತ್ಯನಾರಾಯಣ ಅದನ್ನು ಕಿತ್ತುಕೊಂಡರು. ಮೇಯರ್ ಅವರು ಸಭೆಯನ್ನು ಮುಂದೂಡಿದರು.
ಪಾಲಿಕೆ ಸದಸ್ಯೆಯರ ಆರೋಪ ಆಧಾರಹಿತ. ಇದು ನನ್ನ ತೇಜೋವಧೆಯ ಪ್ರಯತ್ನ ಎಂದು ಶಾಸಕ ಮುನಿರತ್ನ ಪ್ರತಿಕ್ರಿಯಿಸಿದ್ದಾರೆ.
ನನ್ನ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ಮಂಜುಳಾ ನಾರಾಯಣಸ್ವಾಮಿ ಆರೋಪಿಸಿದ್ದಾರೆ. ಇದು ರಾಜಕೀಯ ದುರುದ್ದೇಶ, ದ್ವೇಷ, ಅಸೂಯೆಯಿಂದ ಈ ಆರೋಪ ಮಾಡಿದ್ದಾರೆ. ಸ್ವಾಮೀಜಿ ಹತ್ರ ಹೋಗುತ್ತೇವೆ ಎಂದು ಬೆದರಿಸಿದ್ದಾರೆ. ವಿಷ ಕುಡಿಯುವ ಯತ್ನ ಮಾಡಿದ್ದಾರೆ. ಇದು ಸರಿಯಲ್ಲ. ಸಾರ್ವಜನಿಕ ವಲಯದಲ್ಲಿ ನನ್ನ ಹೆಸರು ಕೆಡಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics