ಬೆಂಗಳೂರು: ಕಸಾಯಿಖಾನೆಗೆ ಜಾನುವಾರುಗಳ ಮಾರಾಟ ನಿಷೇಧ ನಿಯಮ ಅಸಾಂವಿಧಾನಿಕ ವಾಗಿದೆ ಎಂದು ಕಾನೂನು ಮತ್ತು ಸಂಸದೀಯ ಖಾತೆ ಸಚಿವ ಟಿ.ಬಿ ಜಯಚಂದ್ರ ಹೇಳಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಹೊಸ ನಿಯಮ 1960ರ ಪ್ರಾಣಿಗಳ ಮೇಲಿನ ಹಿಂಸೆ ನಿಷೇಧ ಕಾಯ್ದೆಗೆ ವಿರೋಧವಾಗಿದೆ ಎಂದು ಹೇಳಿದ್ದಾರೆ.
ಕಾಯ್ದೆ ಮತ್ತು ನಿಯಮಗಳು ತದ್ವಿರುದ್ಧವಾಗಿವೆ. ಕಾಯ್ದೆಯಲ್ಲಿ ಇಲ್ಲದೇ ಇರುವುದನ್ನು ಸೇರಿಸಿ ನಿಯಮ ರೂಪಿಸಲು ಸಂವಿಧಾನದಲ್ಲಿ ಅವಕಾಶವಿಲ್ಲ. ಆತುರದಲ್ಲಿ ರೂಪಿಸಿದ ನಿಯಮಗಳನ್ನು ಪರಿಪಾಲನೆ ಮಾಡಲು ಆಗುತ್ತದೆಯೇ ಇಲ್ಲವೇ ಎಂಬ ಬಗ್ಗೆ ಮತ್ತೊಮ್ಮೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಹೇಳಿದರು.
1964 ರಿಂದಲೇ ಗೋಹತ್ಯೆ ನಿಷೇಧ ಕಾಯ್ದೆ ಕರ್ನಾಟಕದಲ್ಲಿ ಜಾರಿಯಲ್ಲಿದೆ. ಕೇಂದ್ರ ಸರ್ಕಾರದ ನಿಯಮ ಪಾಲನೆ ಮಾಡಿದರೆ ರಾಜ್ಯದ ಕಾಯ್ದೆ ಮೀರಿ ಕಾನೂನು ಪಾಲನೆ ಮಾಡಬೇಕಾದ ಸ್ಥಿತಿ ಬರಲಿದೆ ಎಂದು ಸಂಪುಟ ಸಭೆಯಲ್ಲಿ ವಿವರಿಸಿದ್ದೇನೆ ಎಂದರು.