ಬೆಂಗಳೂರು: ಬಿಜೆಪಿ ಹಮ್ಮಿಕೊಂಡಿರುವ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಯ ಕಾರಣದಿಂದ ತುಮಕೂರು ರಸ್ತೆಯಲ್ಲಿ ಗುರುವಾರ ಸಂಚಾರ ದಟ್ಟಣೆ ಉಂಟಾಗಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಕರೆತರಲು ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಕಾರು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಅವರೂ ವಿಮಾನ ನಿಲ್ದಾಣದಲ್ಲಿ ಕಾಯಬೇಕಾಗಿ ಬಂತು ಎಂದು ವರದಿಯಾಗಿದೆ. ಇನ್ನೂ ಕಾರಿನಲ್ಲಿ ಬರಲು ಸಾಧ್ಯವಾಗದ ಕಾರಣ ಅಮಿತ್ ಶಾ ಗಂಟೆಗಟ್ಟಲೇ ಕಾದ ನಂತರ ಹೆಲಿಕಾಪ್ಟರ್ ಮೂಲಕ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆಗಮಿಸಿ 72 ದಿನಗಳ ಕಾಲ ನಡೆಯುವ ಪರಿವರ್ತನಾ ರ್ಯಾಲಿಗೆ ಚಾಲನೆ ನೀಡಿದ್ದಾರೆ.
ತುಮಕೂರು ರಸ್ತೆಯಲ್ಲಿರುವ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಸಮಾರಂಭ ನಡೆಯುತ್ತಿದ್ದು ವಿವಿಧ ಜಿಲ್ಲೆಗಳಿಂದ ಸಾವಿರಾರು ಬೈಕ್‌ಗಳಲ್ಲಿ ಕಾರ್ಯಕರ್ತರು ಆಗಮಿಸಿದ ಹಿನ್ನಲೆ ಭಾರೀ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಾಗಿದೆ.
ಸಮಾರಂಭದಲ್ಲಿ ಪಾಲ್ಗೊಳ್ಳಲು ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಮಾದಾವರ ಬಳಿಯ ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಮೈದಾನಕ್ಕೆ ಬರುತ್ತಿದ್ದಾರೆ. ಬೇರೆ ಬೇರೆ ಕಡೆಗಳಿಂದ ಬಸ್, ವ್ಯಾನ್, ಕಾರುಗಳ ಜತೆಗೆ ಬೈಕ್‌ಗಳ ಮೂಲಕ ಕಾರ್ಯಕರ್ತರು ಮೈದಾನದ ಕಡೆಗೆ ಬರುತ್ತಿದ್ದಾರೆ. ಇದರಿಂದಾಗಿ ತುಮಕೂರು ರಸ್ತೆಯಲ್ಲಿ ವಾಹನಗಳು ಆಮೆಗತಿಯಲ್ಲಿ ಸಾಗುತ್ತಿದ್ದು ವಾಹನ ಸವಾರರು ಹಿಡಿ ಶಾಪ ಹಾಕುತ್ತಿದ್ದಾರೆ.
ದಟ್ಟಣೆಯಲ್ಲಿ ಸಿಲುಕಿರುವ ವಾಹನ ಸವಾರರು ಪರದಾಡುತ್ತಿದ್ದಾರೆ. ಸಂಚಾರ ದಟ್ಟಣೆಯಲ್ಲಿ ಆಂಬುಲೆನ್ಸ್‌ಗಳೂ ಸಿಲುಕಿಕೊಂಡಿವೆ. ಬೇರೆ ಊರುಗಳಿಗೆ ತೆರಳಬೇಕಿರುವ ಪ್ರಯಾಣಿಕರು ಬಸ್‌ಗಳಲ್ಲೇ ಗಂಟೆಗಟ್ಟಲೆ ಸಮಯ ವ್ಯಯಿಸುವಂತಾಗಿದೆ.
ಬೆಳಗ್ಗೆ 11 ಗಂಟೆಯಿಂದಲೇ ಕಾರ್ಯಕ್ರಮ ಆರಂಭವಾಗಿದ್ದು, ಅಮಿತ್ ಶಾ ಅವರು ಮಧ್ಯಾಹ್ನ 12ಕ್ಕೆಯಾತ್ರೆಗೆ ಚಾಲನೆ ನೀಡಬೇಕಿತ್ತು. ಆದರೆ ಸಮಯಕ್ಕೆ ಸರಿಯಾಗಿ ಬರಲು ಸಾಧ್ಯವಾಗಲಿಲ್ಲ.