ಬೆಂಗಳೂರು: ರಾಜಸ್ತಾನದ ಹಳ್ಳಿಯೊಂದರಲ್ಲಿ ಅಪಹರಣಕ್ಕೀಡಾಗಿದ್ದ 16 ವರ್ಷದ ಬಾಲಕಿಯನ್ನು ರೈಲ್ವೆ ರಕ್ಷಣಾ ಪಡೆ ರಕ್ಷಿಸಿದೆ.
ರಾಜಸ್ತಾನದ ನಾಗೌರ್ ಜಿಲ್ಲೆಯ ಹುಡುಗಿ ಕಳೆದ ಶನಿವಾರ ತನ್ನ ತಾಯಿಗೆ ಹುಷಾರಿಲ್ಲವೆಂದು ಮೆಡಿಕಲ್ ನಿಂದ ಔಷಧ ತರಲೆಂದು ಹೋಗಿದ್ದಳು. ಮನೆಗೆ ವಾಪಸಾಗುತ್ತಿದ್ದಾಗ ಅಪರಿಚಿತರು ಅವಳ ಬಳಿ ಆಗಮಿಸಿದರು. ಏರೋಸೆಲ್ ನ್ನು ಬಾಲಕಿ ಮುಖಕ್ಕೆ ಸಿಂಪಡಿಸಿ ಪ್ರಜ್ಞೆ ತಪ್ಪುವಂತೆ ಮಾಡಿ ಅಪಹರಿಸಿದ್ದರು. ಔಷಧ ತರಲೆಂದು ಹೋದ ಬಾಲಕಿ ಮನೆಗೆ ಹಿಂತಿರುಗದಿದ್ದಾಗ ಆಕೆಯ ಮನೆಯವರು ಗಾಬರಿಗೊಳಗಾಗಿ ಪೊಲೀಸ್ ಠಾಣೆಗೆ ದೂರು ನೀಡಿದರು. ಬಾಲಕಿಯನ್ನು ಯಾರೋ ಅಪಹರಿಸಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿತು.
ಕೂಡಲೇ ರಾಜಸ್ತಾನದ ಪೊಲೀಸರು ಬೆಂಗಳೂರಿನ ರೈಲ್ವೆ ರಕ್ಷಣಾ ಪಡೆಗೆ ವಿಷಯ ತಲುಪಿಸಿದರು. ಬಾಲಕಿಯ ಫೋಟೋವನ್ನು ಕೂಡ ಕಳುಹಿಸಿದರು. ನಿನ್ನೆ ಜೈಪುರದಿಂದ ರೈಲು ಅಪರಾಹ್ನ 3 ಗಂಟೆಗೆ ಬೆಂಗಳೂರಿಗೆ ತಲುಪಿತು. ರೈಲ್ವೆ ರಕ್ಷಣಾ ಪಡೆ ಪೊಲೀಸರು ಬಾಲಕಿಯನ್ನು ಹುಡುಕಿದಾಗ ಶೌಚಾಲಯದಲ್ಲಿ ಪತ್ತೆಯಾದಳು. ಬಾಯಿಗೆ ಬಟ್ಟೆ ಕಟ್ಟೆ ಕೈ ಕಾಲುಗಳನ್ನು ಹಗ್ಗದಿಂದ ಕಟ್ಟಿಹಾಕಿದ್ದರು. ಅಪಹರಿಸಿದವರು ರೈಲಿನಲ್ಲಿ ಸಿಕ್ಕಿರಲಿಲ್ಲ. ಬಾಲಕಿಯ ಪೋಷಕರಿಗೆ ಪೊಲೀಸರು ಮಾಹಿತಿ ತಲುಪಿಸಿದರು. ಬೆಂಗಳೂರಿಗೆ ಆಗಮಿಸಿದ ಪೋಷಕರಿಗೆ ಬಾಲಕಿಯನ್ನು ಹಸ್ತಾಂತರಿಸಲಾಯಿತು.