ರಾಜ್ಯ

ಬೆಂಗಳೂರು ವಿವಿ ಕುಲಪತಿ ನೇಮಕ: ಸರ್ಕಾರ, ರಾಜ್ಯಪಾಲರ ನಡುವೆ ಹಗ್ಗಜಗ್ಗಾಟ ಆರಂಭ

Manjula VN

ಬೆಂಗಳೂರು: ಮೈಸೂರು ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ನೇಮಕ ವಿಚಾರದಲ್ಲಿ ರಾಜ್ಯಪಾಲ ಹಾಗೂ ಸರ್ಕಾರದ ನಡುವೆ ಹಗ್ಗಜಗ್ಗಾಟ ಆರಂಭವಾಗಿದೆ. 

ಬೆಂಗಳೂರು, ಮೈಸೂರು ಸೇರಿದಂತೆ ತುಮಕೂರು ವಿಶ್ವವಿದ್ಯಾಲಯ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ಜಾನಪದ ವಿಶ್ವವಿದ್ಯಾಲಯ ಕುಲಪತಿಗಳ ನೇಮಕ ಬಾಕಿಯಿದ್ದು, ಈ ಸಂಬಂಧ ಕಳೆದ 6 ತಿಂಗಳುಗಳಿಂದಲೂ ಪ್ರಕ್ರಿಯೆ ನಡೆಯುತ್ತಿದೆ. ಕುಲಪತಿ ಶೋಧನಾ ಸಮಿತಿ ರಚಿಸಿ ಆಯ್ಕೆಯಾದ ಹೆಸರುಗಳನ್ನು ರಾಜಭವನಕ್ಕೆ ಕಳುಹಿಸಿ ಕೊಡಲಾಗಿದೆ. 

ಆದರೆ, ಪ್ರತಿಷ್ಠಿತ ಎನಿಸಿಕೊಂಡಿರುವ ಬೆಂಗಳೂರು ಹಾಗೂ ಮೈಸೂರು ವಿಶ್ವವಿದ್ಯಾಲಯಗಳಿದೆ ತಮಗೆ ಆಪ್ತರಾದವರನ್ನು ನೇಮಿಸುವಂತೆ ಸರ್ಕಾರದ ಕಡೆಯಿಂದ ರಾಜಭವನದ ಮೇಲೆ ಒತ್ತಡ ಹೇರಲಾಗುತ್ತಿದೆ. ಹಾಗಾಗಿ ರಾಜ್ಯಪಾಲರು ಅಂಗೀಕಾರ ನೀಡಿಲ್ಲ. ಬದಲಾಗಿ ಹೊಸ ಪ್ರಸ್ತಾವ ಕಳುಹಿಸಿಕೊಡುವಂತೆ ನಿರ್ದೇಶ ನೀಡಿದ್ದಾರೆಂದು ಹೇಳಲಾಗುತ್ತಿದೆ. 

ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ನೇಮಕ ಮಾಡುವುದು ರಾಜಭವನದ ಕೆಲಸವಾಗಿದ್ದು, ಕುಲಪತಿ ಶೀಘ್ರಗತಿಯಲ್ಲಿ ನೇಮಕ ಮಾಡುವಂತೆ ಈ ಹಿಂದೆ ರಾಜ್ಯ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿಯವರು ರಾಜ್ಯಾಪಾಲರಿಗೆ ಮನವಿ ಮಾಡಿದ್ದರು. 

ಈ ಮನವಿಗೆ ಪತ್ರದ ಮೂಲಕ ಪ್ರತಿಕ್ರಿಯೆ ನೀಡಿರುವ ರಾಜ್ಯಪಾಲ ವಜುಭಾಯ್ ವಾಲಾ ಅವರು, ರಾಜಭವನದತ್ತ ಬೆಟ್ಟು ಮಾಡಿ ತೋರಿಸುವ ಬದಲು ನಿಮ್ಮ ಇಲಾಖೆ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದರತ್ತ ಗಮನ ಹರಿಸಿ ಎಂದು ಸಲಹೆ ನೀಡಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. 

ಮೈಸೂರು ವಿಶ್ವವಿದ್ಯಾಲಯದಲ್ಲಿ ಕಳೆದ ಜನವರಿ ತಿಂಗಳಿನಂದಲೂ ಕುಲಪತಿಗಳಿಲ್ಲ. ಇನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲೂ ಫೆಬ್ರವರಿ ತಿಂಗಳಿನಿಂದಲೂ ಕುಲಪತಿಗಳಿಲ್ಲ ಎಂದು ರಾಜಭವನದ ಉನ್ನತ ಮೂಲಗಳು ಮಾಹಿತಿ ನೀಡಿವೆ. 
SCROLL FOR NEXT