ನವದೆಹಲಿ: ಕರ್ನಾಟಕದಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಮಾರಾಟ, ತಯಾರಿಕೆ, ವಿತರಣೆ ಮತ್ತು ಬಳಕೆ ನಿಷೇಧಿಸಿದ್ದ ರಾಜ್ಯ ಸರ್ಕಾರದ ಆದೇಶಕ್ಕೆ ತಡೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ರಾಜ್ಯಾದ್ಯಂತ ಪ್ಲಾಸ್ಟಿಕ್ ನಿಷೇಧಿಸಿ ರಾಜ್ಯ ಸರ್ಕಾರ ಕಳೆದ ಮಾರ್ಚ್ 11, 2016ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ಕೆನರಾ ಪ್ಲಾಸ್ಟಿಕ್ ತಯಾರಕರು ಮತ್ತು ವ್ಯಾಪಾರಿಗಳ ಸಂಘ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಮದನ್ ಬಿ ಲೋಕೂರ್ ಹಾಗೂ ನ್ಯಾಯಮೂರ್ತಿ ದೀಪಕ್ ಗುಪ್ತಾ ಅವರು ವಜಾಗೊಳಿಸಿದ್ದಾರೆ.
2016 ಮಾರ್ಚ್ 11ರಿಂದ ರಾಜ್ಯದಾದ್ಯಂತ ಕೆಲವು ಪ್ಲಾಸ್ಟಿಕ್ ವಸ್ತುಗಳ ಬಳಕೆ ಮೇಲೆ ಸರ್ಕಾರ ನಿಷೇಧ ಹೇರಿ ಆದೇಶ ಹೊರಡಿಸಿದೆ. 1986ರ ಪರಿಸರ ಸಂರಕ್ಷಣೆ ಕಾಯ್ದೆ ಪ್ರಕಾರ ಯಾರೂ ಕೂಡ ಪ್ಲಾಸ್ಟಿಕ್ ಬ್ಯಾಗ್, ಕ್ಯಾರಿಯರ್ ಬ್ಯಾಗ್, ಪೋಸ್ಟರ್, ಟೇಬಲ್ ಕವರ್, ಪ್ಲಾಸ್ಟಿಕ್ ಧ್ವಜ, ಪ್ಲಾಸ್ಟಿಕ್ ಥರ್ಮಾಕೋಲ್ ಬಳಸುವಂತಿಲ್ಲ.