ಬೆಂಗಳೂರು: ನಗರದ ವಾರ್ಡ್ ಮಿತಿಯಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲು ಸ್ಥಳ ಸಿಗುತ್ತದೆ, ಆದರೆ ಘನ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸಲು ಬಿಬಿಎಂಪಿಗೆ ಜಾಗ ಸಿಗುವುದಿಲ್ಲವೇ ಎಂದು ಕರ್ನಾಟಕ ಹೈಕೋರ್ಟ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಪ್ರಶ್ನಿಸಿದೆ.
ಘನ ತ್ಯಾಜ್ಯಾ ನಿರ್ವಹಣೆಗೆ ಸಂಬಂಧಿಸಿದಂತೆ ನಾಗರಿಕರ ಸಮೂಹವೊಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಬಿ.ಎಸ್ ಪಾಟೀಲ್ ಮತ್ತು ಬಿ.ವಿ ನಾಗರತ್ನ ಅವರನ್ನೊಳಗೊಂಡ ವಿಭಾಗೀಯ ಪೀಠ, ವಾರ್ಡ್ ಮಟ್ಟದಲ್ಲಿ ತ್ಯಾಜ್ಯವನ್ನು ಸಂಸ್ಕರಿಸುವ ಮೈಕ್ರೋ-ಲೆವೆಲ್ ಕ್ರಿಯಾ ಯೋಜನೆ ಸಲ್ಲಿಸುವಂತೆ ಬಿಬಿಎಂಪಿಗೆ ನಿರ್ದೇಶನ ನೀಡಿದೆ.
ಬೆಂಗಳೂರು ದೆಹಲಿಯಂತಾಗುವಂತೆ ಬಿಡಬೇಡಿ, ನಮ್ಮ ಮುಂದಿನ ಪೀಳಿಗೆ ಆರೋಗ್ಯಯುತವಾದ ಜೀವನ ನಡೆಸಬೇಕು, ವಾರ್ಡ್ ಗಳೊಳಗೆ ಘನ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸಿ, ಇಲ್ಲದಿದ್ದರೇ ಹಲವು ಕಾಯಿಲೆಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ಬೆಂಗಳೂರಿನ ಹೊಂಡಗಳಲ್ಲಿ ಕಸ ಸುರಿಯುವ ಮುನ್ನ ಸ್ಥಳೀಯ ಜನರ ಆರೋಗ್ಯದ ಬಗ್ಗೆ ಗಮನ ಹರಿಸಿ ಎಂದು ಹೇಳಿದೆ.
ಹಲವು ಯೋಜನೆಗಳಿಗೆ ಹಣ ವ್ಯಯಿಸುತ್ತೀರಿ, ಆದರೆ ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಮಾತ್ರ ಏಕಿಲ್ಲ, ಇದು ದೇಶದ ಮುಂದಿನ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ವಿಭಾಗೀಯ ಪೀಠ ತಿಳಿಸಿದೆ.
ನ್ಯಾಯಗ್ರಾಮದಲ್ಲಿರುವ ನಮ್ಮ ನಿವಾಸಕ್ಕೆ ತೆರಳುವ ಮಾರ್ಗ ಮಧ್ಯೆ ಹೆಬ್ಬಾಳ ಸಮೀಪ ಗಬ್ಬು ನಾರುತ್ತಿರುವುದು ನಮ್ಮ ಅನುಭವಕ್ಕೆ ಬಂದಿದೆ, ನಿಮ್ಮ ಕ್ರಮ ಸಾಂಪ್ರಾದಾಯಿಕವಾಗಿದ್ದು, ತೀರಾ ನಿಧಾನವಾಗಿದೆ, ನಗರದಲ್ಲಿ ಕಸದ ಸಮಸ್ಯೆ ಬಗೆಹರಿಸಲು ನೀವು ಯಾವುದೇ ಹೊಸ ತಂತ್ರಜ್ಞಾನ ಮತ್ತು ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಹೇಳಿದೆ, ಕೂಡಲೇ ಉತ್ತಮ ಕ್ರಮ ಕೈಗೊಂಡು ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದ ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.