ರಾಜ್ಯ

ಬೆಂಗಳೂರು: ವಿಜ್ಞಾನಿ ಸಿವಿ ರಾಮನ್ ಮನೆಯಲ್ಲಿ ಗಂಧದ ಮರ ಕಳವು

Lingaraj Badiger
ಬೆಂಗಳೂರು: ದುಷ್ಕರ್ಮಿಗಳ ತಂಡವೊಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಸಿವಿ ರಾಮನ್ ಅವರ ಮನೆಯ ಆವರಣದಲ್ಲಿದ್ದ ಎರಡು ಗಂಧದ ಮರ ಕಳವು ಮಾಡಿದ ಘಟನೆ ಶನಿವಾರ ನಡೆದಿದೆ.
ಇಂದು ಬೆಳಗಿನ ಜಾವ 3.30ರ ಸುಮಾರಿಗೆ ಕಾರಿನಲ್ಲಿ ಬಂದ ಆರು ದುಷ್ಕರ್ಮಿಗಳ ತಂಡ ಸಿವಿ ರಾಮನ್ ಮನೆಯ ಸೆಕ್ಯೂರಿಟಿಗಳಿಗೆ ಲಾಂಗ್ ತೋರಿಸಿ, ಆವರಣದಲ್ಲಿದ್ದ ಗಂಧದ ಮರಗಳನ್ನು ಕತ್ತರಿಸಿ ಅದನ್ನು ತುಂಡು ಮಾಡಿ ಎರಡು ವಾಹನದಲ್ಲಿ ತೆಗೆದುಕೊಂಡು ಹೋಗಿದ್ದಾರೆ. 
ಕತ್ತಿ ಹಾಗೂ ಮಚ್ಚಿನೊಂದಿಗೆ ಬಂದಿದ್ದ ದುಷ್ಕರ್ಮಿಗಳು ಮುಖಕ್ಕೆ ಮಂಕಿ ಟೋಪಿ ಹಾಕಿಕೊಂಡಿದ್ದು, ತಮ್ಮ ಕುತ್ತಿಗೆ ಕತ್ತಿ ಹಿಡಿದು ಬೆದರಿಸಿ ಮನೆಯ ಆವರಣಕ್ಕೆ ತೆರಳಿ ಯಂತ್ರದಿಂದ ಸದ್ದಾಗದಂತೆ ಎರಡು ಗಂಧದ ಮರಗಳನ್ನು ಕತ್ತರಿಸಿಕೊಂಡು ಹೊರಭಾಗದಲ್ಲಿದ್ದ ಓಮಿನಿ ಕಾರಿಗೆ ತುಂಬಿಕೊಂಡು ಪರಾರಿಯಾಗಿದ್ದಾರೆ ಎಂದು ಸೆಕ್ಯೂರಿಟಿ ಗಾರ್ಡ್ ಶ್ರೀನಿವಾಸ್ ಮತ್ತು ಗಂಗಾಧರ್ ಅವರು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಮಲ್ಲೇಶ್ವರಂ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದು, ದುಷ್ಕರ್ಮಿಗಳು ಬಂದು ಹೋಗಿರುವ ದೃಶ್ಯ ಮುಂಭಾಗದ ರಸ್ತೆಯಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದನ್ನು ಪರಿಶೀಲಿಸಿ ಆರೋಪಿಗಳನ್ನು ಪತ್ತೆ ಹಚ್ಚುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು ಎರಡು ಎಕರೆಗೂ ಹೆಚ್ಚು ವಿಸ್ತೀರ್ಣದಲ್ಲಿರುವ ಈ ಮನೆಯಲ್ಲಿ ಸಿವಿ ರಾಮನ್ ಅವರು ವಾಸವಾಗಿದ್ದರು. ಈಗ ಅದರ ನಿರ್ವಹಣೆಯನ್ನು ಸರ್ ಸಿ.ವಿ.ರಾಮನ್ ಟ್ರಸ್ಟ್ ವಹಿಸಿಕೊಂಡಿದ್ದು, ಭದ್ರತೆಗಾಗಿ ಸರ್ಕಾರ ಇಬ್ಬರು  ಸೆಕ್ಯೂರಿಟಿ ಗಾರ್ಡ್ ಅನ್ನು ನೇಮಿಸಿದೆ.
SCROLL FOR NEXT