ಬಂಧಿತ ಆರೋಪಿ ಮುನಾಜಿರ್ ಅಹ್ಮದ್
ಬೆಂಗಳೂರು: ಪಾರ್ಶ್ವವಾಯು ಗುಣಪಡಿಸುವ ಸ್ವಾಮೀಜಿಯ ಸೋಗಿನಲ್ಲಿ ಬಂದು ಮತ್ತು ಬರುವ ಔಷಧ ಬೆರೆಸಿದ ನೀರನ್ನು ತೀರ್ಥವೆಂದು ತಾಯಿ–ಮಗಳಿಗೆ ಕುಡಿಸಿ ಚಿನ್ನಾಭರಣ ಹೊತ್ತೊಯ್ದಿದ್ದ ಕಳ್ಳ ಸ್ವಾಮಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಮಡಿವಾಳ ಪೊಲೀಸರು ಕಳ್ಳ ಸ್ವಾಮಿ ಮುನಾಜಿರ್ ಅಹ್ಮದ್ ನನ್ನು ಬಂಧಿಸಿದ್ದು, ಈ ಹಿಂದೆ ನಗರದ ಬಿಟಿಎಂ ಲೇಔಟ್ ನಲ್ಲಿ ವೃದ್ಥ ಮಹಿಳೆಯರನ್ನು ವಂಚಿಸಿ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಹೊತ್ತು ಪರಾರಿಯಾಗಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸರು ತಿಳಿಸಿರುವಂತೆ ಬಿಟಿಎಂ ಲೇಔಟ್ ಒಂದನೇ ಹಂತದಲ್ಲಿ ನವೆಂಬರ್ 3ರಂದು ಅಶ್ವತ್ ರೆಡ್ಡಿ ಎಂಬುವರು ಮಡಿವಾಳ ಠಾಣೆಗೆ ದೂರು ಕೊಟ್ಟಿದ್ದಾರೆ. ಪೊಲೀಸರು ಸುತ್ತಮುತ್ತಲ ಸಿ.ಸಿ ಟಿ.ವಿ ಕ್ಯಾಮೆರಾಗಳ ಸುಳಿವು ಆಧರಿಸಿ, ನಕಲಿ ಸ್ವಾಮೀಜಿಯ ಬಂಧನಕ್ಕೆ ಬಲೆ ಬೀಸಿದ್ದರು. ಇದೀಗ ಆರೋಪಿ ಮುನಾಜಿರ್ ಅಹ್ಮದ್ ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೂರುದಾರರ ಅಕ್ಕ ರತ್ನಮ್ಮ ಅವರು ತಮ್ಮ 85 ವರ್ಷ ವಯಸ್ಸಿನ ತಾಯಿ ಜತೆ ಬಿಟಿಎಂ ಲೇಔಟ್‌ನಲ್ಲಿ ನೆಲೆಸಿದ್ದು, ಒಂದೂವರೆ ವರ್ಷದಿಂದ ರತ್ನಮ್ಮ ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿದ್ದು, ಹಲವು ಕಡೆ ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗಿರಲಿಲ್ಲ. ಅವರ ಆರೈಕೆಗಾಗಿ ಮನೆಯಲ್ಲೇ ನರ್ಸ್‌ವೊಬ್ಬರನ್ನು ನೇಮಿಸಲಾಗಿತ್ತು. ಕಳೆದ ನವೆಂಬರ್ 2 ರಂದು ಮಧ್ಯಾಹ್ನ ರತ್ನಮ್ಮ ತಮ್ಮ ತಾಯಿಗೆ ಔಷಧ ತರಲು ಮಡಿವಾಳದ ಶಕ್ತಿ ಮೆಡಿಕಲ್ಸ್‌ಗೆ ಹೋಗಿದ್ದರು. ಅಲ್ಲಿಗೆ ಬಂದಿದ್ದ ಈ ಮುನಾಜಿರ್ ಅಹ್ಮದ್, ‘ನಾನು ಮಠವೊಂದರ ಸ್ವಾಮೀಜಿ. ನಿಮ್ಮ ಮಗಳಿಗಿರುವ ಸಮಸ್ಯೆ ನನಗೆ ಗೊತ್ತು. ಪೂಜೆ ಮೂಲಕ ಆ ಕಾಯಿಲೆ ಗುಣಪಡಿಸುತ್ತೇನೆ’ ಎಂದು ನಂಬಿಸಿ ಮನೆ ವಿಳಾಸ ಪಡೆದುಕೊಂಡಿದ್ದ. ಇಂಥ ವಿಚಾರಗಳಲ್ಲಿ ನಂಬಿಕೆ ಇಲ್ಲದ ಮಗ, ಸ್ವಾಮೀಜಿ ಬರುತ್ತಿರುವ ವಿಚಾರ ಗೊತ್ತಾದರೆ ಸಿಟ್ಟಾಗಬಹುದು ಎಂದು ಅವರು ಅಶ್ವತ್ ರೆಡ್ಡಿ ಬಳಿಯೂ ರತ್ನಮ್ಮ ಹೇಳಿರಲಿಲ್ಲ.
ಬಳಿಕ ಅಂದು ಸಂಜೆ ಮನೆಗೆ ಬಂದ ಕಳ್ಳ ಸ್ವಾಮಿ, ಮನೆಯಲ್ಲಿದ್ದ ಇಬ್ಬರು ವೃದ್ಧೆಯರಿಗೆ ಮತ್ತಿನ ಔಷಧಿ ಬೆರೆಸಿದ ತೀರ್ಥ ಕೊಟ್ಟಿದ್ದ. ಅದನ್ನು ಕುಡಿದ ವೃದ್ಧರು ಕೂಡಲೇ ಪ್ರಜ್ಞೆ ತಪ್ಪಿದ್ದಾರೆ. ಅವರು ಪ್ರಜ್ಞೆ ತಪ್ಪುತ್ತಿದ್ದಂತೆಯೇ ಮನೆಯಲ್ಲಿದ್ದ ಒಡೆವೆಗಳನ್ನೆಲ್ಲಾ ತೆಗೆದುಕೊಂಡ ಕಳ್ಳ ಸ್ವಾಮಿ ಮುನಾಜಿರ್ ಅಹ್ಮದ್ ಅಲ್ಲಿಂದ ಪರಾರಿಯಾಗಿದ್ದಾನೆ.
ಬಳಿಕ ಈ ವಿಚಾರ ತಿಳಿದ ಮನೆಯ ಮಾಲೀಕ ಅಶ್ವತ್ ರೆಡ್ಡಿ ಮಡಿವಾಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics