ಬೆಂಗಳೂರು: ತಮಿಳುನಾಡಿಗೆ ಹರಿದುಹೋಗುತ್ತಿರುವ ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೆ.ಸಿ.ವ್ಯಾಲಿ ಮೂಲಕ ಹರಿಸಿ ಸದ್ಬಳಕೆ ಮಾಡಿಕೊಳ್ಳುತ್ತಿರುವ ಯೋಜನೆಯನ್ನು ವಿರೋಧಿಸುವವರು ಮೂರ್ಖರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಹೇಳಿದ್ದಾರೆ.
ಬೆಳ್ಳಂದೂರು ಅಮಾನಿಕರೆಯಲ್ಲಿ ನಿನ್ನೆ ವಿವಿಧ 4 ಘಟಕಗಳ 136 ದಶಲಕ್ಷ ಲೀಟರ್ ಸಾಮರ್ಥ್ಯದ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿರುವ ಅವರು, ಯೋಜನೆಯಿಂದ ಅಂತರ್ಜಲ ಮಟ್ಟ ಹೆಚ್ಚಾಗಲಿದ್ದು, ದನಕರುಗಳಿಗೆ ನೀರು ಮತ್ತು ಕೃಷಿಗೆ ಸಹಕಾರಿಯಾಗಲಿದೆ. ಬೆಂಗಳೂರಿನ ಕೆರೆಗಳಲ್ಲಿ ಉಂಟಾಗುತ್ತಿರುವ ನೊರೆ ಕೂಡ ಕಡಿಮೆಯಾಗಿಲದೆ. ಇಂತಹ ಯೋಜನೆ ಬಗ್ಗೆ ಮಾಹಿತಿ ತಿಳಿಯದೆಯೇ ಕೆಲವರು ಮಾತನಾಡುತ್ತಿದ್ದಾರೆ. ಮತ್ತೆ ಕೆಲವರು ತಿಳಿಸಿದ್ದರೂ ವಿರೋಧಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ನೀರಿನ ಸಂಸ್ಕರಣೆಯಿಂದ ವರ್ತೂರು, ಬೆಳ್ಳಂದೂರು ಕೆರೆಗಳಲ್ಲಿ ನೊರೆ ಸಮಸ್ಯೆ ಬಗೆಹರಿಯುತ್ತದೆ. ಇಲ್ಲಿನ ತ್ಯಾಜ್ಯ ನೀರು ವ್ಯರ್ಥವಾಗಿ ತಮಿಳುನಾಡಿಗೆ ಹರಿದು ಹೋಗುತ್ತಿದೆ. ಅದನ್ನು ಸಂಸ್ಕರಿಸಿ ಕೆರೆಗಳನ್ನು ತುಂಬಿಸಲು ಬಳಸಿಕೊಳ್ಳಬೇಕಿದೆ. ತ್ಯಾಜ್ಯ ನೀರನ್ನು ಕೋಲಾರಕ್ಕೆ ಕೊಡುತ್ತಾರೆಂದು ಕೆಲ ಮೂರ್ಖರು ಆರೋಪಿಸುತ್ತಿದ್ದಾರೆ, ಇಲ್ಲಿನ ತ್ಯಾಜ್ಯ ನೀರು ವ್ಯರ್ಥವಾಗಿ ತಮಿಳುನಾಡಿಗೆ ಹರಿದು ಹೋಗುತ್ತಿದೆ. ಸಂಸ್ಕರಿಸಿದ ನೀರನ್ನೇಕೆ ನಾವು ತಮಿಳುನಾಡಿಗೆ ಕೊಡಬೇಕೆಂದು ಎಂದು ಪ್ರಶ್ನಿಸಿದ್ದಾರೆ.