ಆಸ್ಪತ್ರೆಯ ಹೊರಾಂಗಣದಲ್ಲಿ ಕಾದು ಕುಳಿತಿರುವ ರೋಗಿಗಳು
ರಾಯಚೂರು: ರಾಯಚೂರು ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಬಡತನ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳು ಹಾಗೂ ಅವರ ಸಂಬಂಧಿಕರ ಬಳಿ ಆಸ್ಪತ್ರೆಯ ಸಿಬ್ಬಂದಿಗಳು ಹಣವನ್ನು ಕಿತ್ತು ತಿನ್ನುತ್ತಿದ್ದಾರೆಂದು ತಿಳಿದುಬಂದಿದೆ.
ರಾಯಚೂರು ವೈದ್ಯಕೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ರಿಮ್ಸ್)ಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದಾಗಿ ತಿಳಿದುಬಂದಿದ್ದು, ಹೆರಿಗೆಗೆಂದು ಬರುವ ಪ್ರತೀಯೊಬ್ಬ ಮಹಿಳೆಯರ ಬಳಿ ಇಲ್ಲಿರುವ ನರ್ಸ್ ಗಳು ರೂ.400-600ನ್ನು ಪಡೆಯುತ್ತಿದ್ದಾರೆ. ಆಲ್ಲದೆ, ವಾರ್ಡ್ ಬಾಯ್ ಗಳೂ ಕೂಡ ಮಹಿಳೆಯರನ್ನು ವಾರ್ಡ್ ಗೆ ಸ್ಥಳಾಂತರ ಮಾಡಲು ರೋಗಿಗಳ ಸಂಬಂಧಿಕರ ಬಳಿ ರೂ.100-200 ಲಂಚ ನೀಡುವಂತೆ ಕೇಳುತ್ತಿದ್ದಾರೆಂಬ ಆರೋಪಗಳು ಕೇಳಿ ಬಂದಿವೆ.
ರಿಮ್ಸ್ ಆಸ್ಪತ್ರೆ ಸರ್ಕಾರಿ ಸಂಸ್ಥೆಯಾಗಿದ್ದು, ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡಲಾಗುವ ವೈದ್ಯಕೀಯ ಸೌಲಭ್ಯಗಳು ಹಾಗೂ ಹೆರಿಗೆಗಳನ್ನು ಉಚಿತವಾಗಿ ಮಾಡಬೇಕು. ಆದರೆ, ಇಲ್ಲಿರುವ ಸಿಬ್ಬಂದಿಗಳು ಆಸ್ಪತ್ರೆಗೆ ಬರುವ ರೋಗಿಗಳ ಬಳಿ ಪ್ರತೀಯೊಂದು ಹಂತದಲ್ಲಿಯೂ ಲಂಚವನ್ನು ಕೇಳುತ್ತಿದ್ದಾರೆಂದು ಹೇಳಲಾಗುತ್ತಿದೆ.
ರಿಮ್ಸ್ ಆಸ್ಪತ್ರೆಯ ಅಧಿಕಾರಿಗಳು ಮಾಹಿತಿ ನೀಡಿರುವ ಪ್ರಕಾರ, ಪ್ರತೀನಿತ್ಯ ಆಸ್ಪತ್ರೆಯಲ್ಲಿ 15-20 ಹೆರಿಗೆಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದೆ.
ಆಸ್ಪತ್ರೆಯ ಸಿಬ್ಬಂದಿಗಳಿಗೆ ಲಂಚ ನೀಡಿದ್ದ ವ್ಯಕ್ತಿ ವೆಂಕಟೇಶ್ ಎಂಬುವವರು ಮಾತನಾಡಿ, ನನ್ನ ನಾದಿನಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಬಳಿಕ ಬೆಳಗಿನ ಜಾವ 3.30ರ ಸುಮಾರಿಗೆ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ರೂ.400 ನೀಡುವಂತೆ ಕೇಳಿದ್ದರು. ನನ್ನ ಬಳಿ ಹಣವಿರಲಿಲ್ಲ. ಹೀಗಾಗಿ ಹಣವಿಲ್ಲ ಎಂದು ಹೇಳಿದೆ. ಹಣ ನೀಡಲಿಲ್ಲ ಎಂದರೆ, ತಾಯಿ ಹಾಗೂ ಮಗುವನ್ನು ವಾರ್ಡ್ ಗೆ ಸ್ಥಳಾಂತರಿಸುವುದಿಲ್ಲ ಎಂದು ನರ್ಸ್ ಹೇಳಿದರು ಎಂದು ಹೇಳಿದ್ದಾರೆ.
ಬೆಳಿಗ್ಗೆ 3.30ರ ಸಮಯದಲ್ಲಿ ನಗರದಲ್ಲಿರುವ ಎಲ್ಲಾ ಎಟಿಎಂಗಳಲ್ಲಿ ಸುತ್ತಾಡಿ ಕೊನೆಗೆ ರೂ.300ಯನ್ನು ಸಿಬ್ಬಂದಿಗಳಿಗೆ ನೀಡಿದೆ. ಬಳಿಕ ಮಹಿಳೆಯನ್ನು ಸ್ಥಳಾಂತರ ಮಾಡಲು ಬಂದ ವಾರ್ಡ್ ಬಾಯ್ ರೂ.200 ನೀಡುವಂತೆ ಕೇಳಿದ ಎಂದು ತಿಳಿಸಿದ್ದಾರೆ.
ಮಗುವಿಗೆ ಜನ್ಮ ನೀಡಿದ ಬಳಿಕ ಮಹಿಳೆಯರನ್ನು ವಾರ್ಡ್ ಗೆ ಸ್ಥಳಾಂತರ ಮಾಡಲಾಗುತ್ತದೆ. ಆಸ್ಪತ್ರೆಯಲ್ಲಿ ಒಟ್ಟು 25 ಬೆಡ್ ಗಳಿದ್ದು, ಪ್ರತೀನಿತ್ಯ ಒಬ್ಬರಲ್ಲ ಒಬ್ಬರೂ ದಾಖಲಾಗುತ್ತಲೇ ಇರುತ್ತದೆ. ಆಸ್ಪತ್ರೆಯಲ್ಲಿ ಒಟ್ಟಾರೆಯಾಗಿ 90 ಬೆಡ್ ಗಳಿವೆ ಎಂದು ರಿಮ್ಸ್ ಹೇಳಿದೆ.
ರೋಗಿಯೊಬ್ಬರ ಸಂಬಂಧಿಕಸ್ಥರಾಗಿರುವ ಅಂಬರಮ್ಮ ಎಂಬುವವರು ಮಾತನಾಡಿ, ಒಟ್ಟಾರೆಯಾಗಿ ನಾವು ರೂ.600ನ್ನು ಸಿಬ್ಬಂದಿಗಳಿಗೆ ನೀಡಿದ್ದೇವೆ. ಹಣವನ್ನು ನೀಡದೇ ಹೋದಲ್ಲಿ ವೈದ್ಯರಾಗಲೀ, ನರ್ಸ್ ಗಳಾಗಿ ರೋಗಿ ಕಡೆ ಗಮನ ಕೊಡುವುದಿಲ್ಲ ಎಂದು ಹೇಳಿದ್ದಾರೆ.
ಆಸ್ಪತ್ರೆಯ ಮುಖ್ಯಾಧಿಕಾರಿ ಕವಿತಾ ಪಾಟೀಲ್ ಅವರು ಮಾತನಾಡಿ, ಲಂಚ ಸ್ವೀಕರಿಸುತ್ತಿರುವ ಕುರಿತಂತೆ ಈ ವರೆಗೂ ಯಾವುದೇ ರೀತಿಯ ದೂರುಗಳು ದಾಖಲಾಗಿಲ್ಲ. ನಮ್ಮ ಬಳಿ ಯಾರೊಬ್ಬರೂ ದೂರುಗಳನ್ನೂ ನೀಡಿಲ್ಲ. ಹೀಗಾಗಿ ಈ ಬಗ್ಗೆ ನಾವು ತನಿಖೆ ನಡೆಸಲು ಮತ್ತು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.