ರಾಜ್ಯ

ಕೆಪಿಎಂಇ ತಿದ್ದುಪಡಿ ಕಾಯ್ದೆಗೆ ವಿರೋಧ: ಸಿಎಂ ಭರವಸೆ ಬಳಿಕವೂ ಮುಂದುವರೆದ ವೈದ್ಯರ ಪ್ರತಿಭಟನೆ

Manjula VN
ಬೆಳಗಾವಿ: ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಲು ಕೆಪಿಎಂಇ ತಿದ್ದುಪಡಿ ಕಾಯ್ದೆ ಅಸ್ತ್ರವನ್ನು ಪ್ರಯೋಗಿಸಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವ ಭಾರತೀಯ ವೈದ್ಯಕೀಯ ಸಂಘ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ ಬಳಿಕವೂ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿವೆ. 
ಭಾರತೀಯ ವೈದ್ಯಕೀಯ ರಾಜ್ಯ ಘಟಕದ ಮುಖಂಡ ಡಾ.ರವೀಂದ್ರ ಮತ್ತು ಪದಾಧಿಕಾರಿಗಳ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತುರತೆ ನಡೆಸಿದ್ದು, ಪ್ರತಿಭಟನೆ ನಡೆಸದಂತೆ ಮನವಿ ಮಾಡಿದ್ದರು. 
ವೈದ್ಯರಿಗೆ ತೊಂದರೆ ಕೊಡುವ ಉದ್ದೇಶ ಸರ್ಕಾರಕ್ಕಿಲ್ಲ. ಅಧಿವೇಶನದಲ್ಲಿ ಮಂಡಿಸಲಿರುವ ಮಸೂದೆ ಕುರಿತು ಯಾವುದ ರೀತಿಯ ಭಯ ಬೇಡ. ವೈದ್ಯರಿಗೆ ತೊಂದನೆ ಅಥವಾ ಕಿರುಕುಳ ನೀಡಲು ಮಸೂದೆಯನ್ನು ರೂಪಿಸಿಲ್ಲ. ಮಸೂದೆ ಮಂಡನೆಗೆ ಮುನ್ನ ಆರೋಗ್ಯ ಸಚಿವರು, ಐಎಂಎ ಪದಾಧಿಕಾರಿಗಳ ಜೊತೆ ಮತ್ತೊಂದು ಸುತ್ತಿನ ಸಮಾಲೋಚನೆ ನಡೆಸುತ್ತೇನೆ. ಬಡವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕಾನೂನು ಜಾರಿಗೆ ತರಲು ಸರ್ಕಾರ ಮುಂದಾಗಿರೆ ವೈದ್ಯರಲ್ಲಿ ಎಲ್ಲರೂ ಕೆಟ್ಟವರಲ್ಲ. ವೈದ್ಯರನ್ನು ನಿಯಂತ್ರಿಸುವ ಉದ್ದೇಶವೂ ನಮಗಿಲ್ಲ ಎಂದು ಹೇಳಿದ್ದಾರೆ. 
ಮಾತುಕತೆ ವೇಳೆ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿರುವ ವೈದ್ಯರು, ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಕಾಯ್ದೆ ಅತ್ಯಂತ ಕಠಿಣವಾಗಿದ್ದು, ಒಂದು ವೇಳೆ ಮಸೂದೆ ಜಾರಿಯಾಗಿದ್ದೇ ಆದರೆ, ರಾಜ್ಯದಲ್ಲಿರುವ ಹಲವು ನರ್ಸಿಂಗ್ ಹೋಂಗಳನ್ನು ಮುಚ್ಚುವ ಪರಿಸ್ಥಿತಿ ಎದುರಾಗುತ್ತದೆ ಎಂದು ಹೇಳಿದ್ದಾರೆ. 
ಕರ್ನಾಟಕ ಆರ್ಥೋಪೆಡಿಕ್ ಅಸೋಸಿಯೇಷನ್ ಅಧ್ಯಕ್ಷ ಡಾ.ನಿತ್ಯಾನಂದ ರಾವ್ ಅವರು ಮಾತನಾಡಿ, ವೈದ್ಯಕೀಯ ಚಿಕಿತ್ಸೆಯಲ್ಲಿ ಖಾಸಗಿ ಆಸ್ಪತ್ರೆಗಳು ಶೇ76ರಷ್ಟು ಕೊಡುಗೆಯನ್ನು ನೀಡುತ್ತಿವೆ. ಉಳಿದಿದ್ದನ್ನು ಸರ್ಕಾರ ಮಾಡುತ್ತಿದೆ. ವೈದ್ಯಕೀಯ ಚಿಕಿತ್ಸೆಗಳಿಗೆ ಸರ್ಕಾರವೇ ಶುಲ್ಕವನ್ನು ನಿಗದಿ ಮಾಡುವುದರಿಂದ ಇದು ಸರ್ಕಾರಿ ಆಸ್ಪತ್ರೆಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ. 
ಶೀಘ್ರದಲ್ಲಿ ಆರೋಗ್ಯ ಸಚಿವರು ಹಾಗೂ ಭಾರತೀಯ ವೈದ್ಯಕೀಯ ಸಂಘದ ಸದಸ್ಯರೊಂದಿಗೆ ಸಭೆಯನ್ನು ನಡೆಸಿ ಮಾತುಕತೆ ನಡೆಸುತ್ತೇನೆಂದು ತಿಳಿಸಿದ್ದಾರೆ. 
ಆರೋಗ್ಯ ಸಚಿವರನ್ನು ರಾಕ್ಷಸ ಎಂದ ಈಶ್ವರಪ್ಪ
ಕೆಪಿಎಂಇ ತಿದ್ದುಪಡಿ ಕಾಯ್ದೆಗೆ ವೈದ್ಯಕೀಯ ಸಂಘ ತೀವ್ರ ವಿರೋಧ ವ್ಯಕ್ತಪಡಿಸುತ್ತಿರವ ಬೆನ್ನಲ್ಲೇ ವೈದ್ಯರ ಬೆಂಬಲಕ್ಕೆ ನಿಂತಿರುವ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಅವರು, ರಾಜ್ಯದ ಆರೋಗ್ಯ ಸಚಿವರನ್ನು ರಾಕ್ಷಸ ಎಂದು ಎಂದು ಹೇಳಿದ್ದಾರೆ. 
ವೈದ್ಯಕೀಯ ವಲಯದ ಬಗ್ಗೆ ಯಾವುದೇ ರೀತಿಯ ಮಾಹಿತಿಗಳನ್ನು ತಿಳಿದುಕೊಳ್ಳದ ಆರೋಗ್ಯ ಸಚಿವರು ಕೆಪಿಎಂಇ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲು ಹೊರಟಿಸಿದ್ದಾರೆಂದು ಹೇಳಿದ್ದಾರೆ. 
ಜೆಡಿಎಸ್ ರಾಜ್ಯಾದ್ಯಕ್ಷ ಹೆಚ್.ಡಿ.ಕುಮಾರಸ್ವಾಮಿಯವರು ಮಾತನಾಡಿ, ಯಾವುದೇ ರೀತಿಯ ಅಧ್ಯಯನ ನಡೆಸದೆಯೇ ಮುಖ್ಯಮಂತ್ರಿಗಳು ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಆರೋಗ್ಯ ಸಚಿವರಾಗಲು ರಮೇಶ್ ಅವರು ಅರ್ಹರಲ್ಲ. ಶಿಫಾರಸ್ಸುಗಳನ್ನು ಪರಿಗಣಿಸದ ಸರ್ಕಾರ ಸಮತಿಯನ್ನೇಕೆ ರಚನೆ ಮಾಡಬೇಕಿತ್ತು ಎಂದು ಪ್ರಶ್ನಿಸಿದ್ದಾರೆ. 
SCROLL FOR NEXT