ಆಸ್ಪತ್ರೆಯತ್ತ ನಡೆದು ಸಾಗುತ್ತಿರುವ ಗರ್ಭಿಣಿ ಮಹಿಳೆ
ಮಂಡ್ಯ: ಸಿಎಂ ಸಿದ್ದರಾಮಯ್ಯ ಅವರ ವಾಹನಗಳ ಸುಗಮ ಸಂಚಾರಕ್ಕಾಗಿ ತುಂಬು ಗರ್ಭಿಣಿಯನ್ನು ಆಸ್ಪತ್ರೆಗೆ ಹೊತ್ತೊಯ್ಯುತ್ತಿದ್ದ ಆ್ಯಂಬುಲೆನ್ಸ್ ವಾಹನವನ್ನು ತಡೆದ ಘಟನೆ ಮಂಗಳವಾರ ಮಂಡ್ಯದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ಬಿಜೆಎಸ್ ವೃತ್ತದಲ್ಲಿ ಈ ಘಟನೆ ನಡೆದಿದ್ದು, ನಿನ್ನೆ ಸಿಎಂ ಸಿದ್ದರಾಮಯ್ಯ ಅವರು ನಾಗಮಂಗಲದಲ್ಲಿ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ತೆರಳುತ್ತಿದ್ದರು,. ಸಿಎಂ ಸಿದ್ದರಾಮಯ್ಯ ಹಾಗೂ ಅವರ ಬೆಂಗಾವಲು ಪಡೆ ವಾಹನಗಳು ಬಿಜಿಎಸ್ ವೃತ್ತದತ್ತ ಆಗಮಿಸುತ್ತಿದ್ದಂತೆಯೇ ಬಿಜಿಎಸ್ ವೃತ್ತದ ಟಿಬಿ ಎಕ್ಸ್ ಟೆಂಷನ್ ಬಳಿಯ ಟ್ರಾಫಿಕ್ ಪೊಲೀಸರು ಎಲ್ಲ ವಾಹನಗಳನ್ನು ತಡೆದು ಸಿಎಂ ವಾಹನದ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಆದರೆ ಅದೇ ರಸ್ತೆಯಲ್ಲೇ ತುಂಬು ಗರ್ಭಿಣಿ ಇದ್ದ ಆ್ಯಂಬುಲೆನ್ಸ್ ಕೂಡ ಇತ್ತು. ಮಂಡ್ಯ ಮೂಲದ ಮಹಿಳೆಯನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುತ್ತಿತ್ತು, ಆದರೆ ಟ್ರಾಫಿಕ್ ಪೊಲೀಸರು ಸಿಎಂ ವಾಹನದ ಸಂಚಾರಕ್ಕಾಗಿ ಅನುವು ಮಾಡಿಕೊಡಲು ಆ್ಯಂಬುಲೆನ್ಸ್ ಅನ್ನು ಕೂಡ ತಡೆದಿದ್ದಾರೆ. ಹೀಗಾಗಿ ಬೇರೆ ದಾರಿಯಿಲ್ಲದೇ ಆ್ಯಂಬುಲೆನ್ಸ್ ನಲ್ಲಿದ್ದ ಗರ್ಭಣಿ ಮಹಿಳೆ ಹಾಗೂ ಅವರ ಸಂಬಂಧಿಗಳು ಆ್ಯಂಬುಲೆನ್ಸ್ ನಿಂದ ಇಳಿದು ನಡೆದುಕೊಂಡೇ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದಾರೆ.
ಈ ಬಗ್ಗೆ ಅಲ್ಲಿ ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸ್ ಧನಂಜಯ ಅವರನ್ನು ಕೇಳಿದಾಗ ಸಿಎಂ ವಾಹನ ಬರುತ್ತಿತ್ತು. ಹೀಗಾಗಿ ಟ್ರಾಫಿಕ್ ಸ್ಥಗಿತಗೊಳಿಸಲಾಗಿತ್ತು. ಆದರೆ ಆ್ಯಂಬುಲೆನ್ಸ್ ಶಬ್ದ ತಮಗೆ ಕೇಳಿಸಲಿಲ್ಲ.. ಒಂದು ವೇಳೆ ಮಹಿಳೆಯ ಸಂಬಂಧಿಕರು ಕೇಳಿದ್ದರೆ ಖಂಡಿತಾ ಆ್ಯಂಬುಲೆನ್ಸ್ ಹೋಗಲು ದಾರಿ ಮಾಡಿಕೊಡುತ್ತಿದ್ದೆ ಎಂದು ಸಮಜಾಯಿಷಿ ನೀಡಿದ್ದಾರೆ.
ಸ್ಥಳೀಯರೊಬ್ಬರು ಈ ವಿಡಿಯೋವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಮಾಧ್ಯಮಗಳಲ್ಲಿ ಇದು ವ್ಯಾಪಕ ವೈರಲ್ ಆಗಿದೆ. ಅಂತೆಯೇ ಟ್ರಾಫಿಕ್ ಪೊಲೀಸರ ಅಮಾನವೀಯತೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.