ರಾಜ್ಯ

ಮೇಲ್ಮನೆಯಲ್ಲೂ ವಿವಾದಿತ ಕೆಪಿಎಂಇ ವಿಧೇಯಕಕ್ಕೆ ಅಂಗೀಕಾರ

Manjula VN
ಬೆಳಗಾವಿ: ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕಕ್ಕೆ ಗುಬರುವಾದ ವಿಧಾನ ಪರಿಷತ್'ನಲ್ಲೂ ಆಂಗೀಕಾರ ದೊರೆತಿದೆ. 
ಉಭಯ ಸದನಗಳ ಅಂಗೀಕಾರ ಪಡೆದಿರುವ ವಿಧೇಕಕ್ಕೆ ಸದ್ಯದಲ್ಲೇನಿಯಮ ರೂಪಿಸಿ ಅನುಷ್ಠಾನಕ್ಕೆ ತರಲಾಗುವುದು. ನಂತರ ದೇಶದಲ್ಲೇ ಮೊದಲ ಬಾರಿಗೆ ಯೂನಿವರ್ಸಲ್ ಹೆಲ್ತ್ ಕಾರ್ಯಕ್ರಮಕ್ಕೆ ಜಾರಿಗೆ ತಂದು ರೂ.1.43 ಕೋಟಿ ಕುಟುಂಬಗಳಿಗೆ ಸರ್ಕಾರವೇ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೇವೆ ನೀಡಲಿದೆ. ಉಳಿದ ಶೇ.7.5 ರಷ್ಟರ ಜನರ ಬಗ್ಗೆ ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆಯೂ ಚರ್ಚೆ ನಡೆಸಲಾಗುತ್ತದೆ ಎಂದು ರಾಜ್ಯ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ಹೇಳಿದ್ದಾರೆ. 
ಮೇಲ್ಮನೆ ಸದಸ್ಯರ ಜೊತೆಗೆ ನಿನ್ನೆ 2 ಗಂಟೆಗೂ ಹೆಚ್ಚು ಕಾಲ ಚರ್ಚೆ ಬಳಿಕ ಮಾತನಾಡಿರುವ ಅವರು, ಖಾಸಗಿ ಆಸ್ಪತ್ರೆಗಳಲ್ಲಿ ಬಡವರಿಗೆ ಚಿಕಿತ್ಸೆ ನಿರಾಕರಿಸುವುದು ಹಾಗೂ ಚಿಕಿತ್ಸೆ ವಿಫಲವಾಗಿ ರೋಗಿ ಸತ್ತರೆ ಶವವನ್ನು ಒತ್ತೆಯಾಗಿ ಇಟ್ಟುಕೊಳ್ಳುವುದು ಇರುವುದಿಲ್ಲ. ಬಿಪಿಎಲ್ ಕುಟುಂಬಗಳ ಶೇ.100 ರಷ್ಟು ಚಿಕಿತ್ಸಾ ವೆಚ್ಚ ಹಾಗೂ ಎಪಿಎಲ್ ಕುಟುಂಬಗಳ ಶೇ.30 ರಷ್ಟು ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಹೀಗಾಗಿ ಖಾಸಗಿ ಆಸ್ಪತ್ರೆಗಳಿಗೂ ಬಿಲ್ ಬಗ್ಗೆ ಆತಂಕ ಇರುವುದಿಲ್ಲ. ಇಂತಹ ಜನಪರ ಕಾಯ್ದೆ ಹಾಗೂ ಕಾರ್ಯಕ್ರಮ ದೇಶದಲ್ಲೇ ಮೊದಲ ಬಾರಿಗೆ ಜಾರಿಗೆ ತರುತ್ತಿದ್ದೇವೆಂದು ತಿಳಿಸಿದರು. 
ಇದೇ ವೇಳೆ ಬಿಜೆಪಿ ನಾಯಕ ರಾಮಚಂದ್ರ ಗೌಡ ಅವರು ಕೆಪಿಎಂಇ ಕಾಯ್ದೆಯನ್ನು ಹಲ್ಲಿಲ್ಲದ ಹಾವು ಎಂದಿದ್ದ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ವಿಧೇಯಕವನ್ನು ಕೆಲವರು ಹಲ್ಲಿಲ್ಲದ ಹಾವು ಎಂದು ಹೋಲಿಸಿದ್ದಾರೆ. ಇದು ಹಾವಲ್ಲ. ತಪ್ಪು ಮಾಡಿದವರಿಗೆ ಕಟ್ಟಿ ಹಾಕುವ ಚಿಕ್ಕ ಹಗ್ಗ ಅಷ್ಟೇ. ಖಾಸಗಿ ವೈದ್ಯಕೀಯ ಸಂಸ್ಥೆಗಳ ದೌರ್ಜನ್ಯ, ಅಮಾನವೀಯ ನಡವಳಿಕೆಯನ್ನು ಕಟ್ಟಿ ಹಾಕಲು ಕಾಯ್ದೆಯನ್ನು ತಂದಿದ್ದೇವೆಯೇ ಹೊರತು ವೈದ್ಯರನ್ನು ಶಿಕ್ಷಿಸುವ ಸಲುವಾಗಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 
SCROLL FOR NEXT