ರಾಜ್ಯ

ಸಾಹಿತ್ಯಕ್ಕಿಂತ ರಾಜಕೀಯ ವಿಷಯಗಳಿಗೆ ಹೆಚ್ಚು ಬಳಕೆಯಾದ ಸಾಹಿತ್ಯ ಸಮ್ಮೇಳನ ಉದ್ಘಾಟನಾ ವೇದಿಕೆ

Sumana Upadhyaya
ಮೈಸೂರು: ನಿನ್ನೆ ಆರಂಭಗೊಂಡ ಮೂರು ದಿನಗಳ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಹಿತ್ಯಕ್ಕಿಂತ ರಾಜಕೀಯ ವಿಷಯಗಳಿಗೆ ಹೆಚ್ಚಿನ ಸುದ್ದಿಯಾಯಿತು. ಸಮ್ಮೇಳನದ ವೇದಿಕೆಯನ್ನು ಗಣ್ಯರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಮತ್ತು ಇತರ ರಾಜಕೀಯ ವಿಷಯಗಳಿಗೆ ಬಳಸಿಕೊಂಡರು. ಸಾಂಸ್ಕೃತಿಕ ಸರ್ವಾಧಿಕಾರ ಸ್ಥಾಪನೆಗೆ ಮತ್ತು ಜಾತ್ಯತೀತ ಶಕ್ತಿಗಳನ್ನು ದುರ್ಬಲಗೊಳಿಸಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿದರು.
ಸಾಹಿತ್ಯ ಸಮ್ಮೇಳನದ ಉದ್ಘಾಟನೆ ನಂತರದ ಭಾಷಣದಲ್ಲಿ ಕರ್ನಾಟಕಕ್ಕೆ ಪ್ರತ್ಯೇಕ ಕನ್ನಡ ಧ್ವಜ ಬೇಕೆಂಬ ಬಲವಾದ ಬೇಡಿಕೆಯನ್ನು ಮುಂದಿಡಲಾಯಿತು.ಕನ್ನಡವನ್ನು ಕಲಿಕೆಯ ಮಾಧ್ಯಮವನ್ನಾಗಿ ಮಾಡಲು ಸಂವಿಧಾನ ತಿದ್ದುಪಡಿ ತರಬೇಕೆಂದು ಒತ್ತಾಯಿಸಲಾಯಿತು. ಇನ್ನು ಕೆಲ ಬರಹಗಾರರು ಸಮ್ಮೇಳನವನ್ನು ಸಿದ್ದರಾಮಯ್ಯ ಸಂಪುಟದ ಸಚಿವರ ವಿರುದ್ಧ ಆರೋಪಿಸಲು ಬಳಸಿಕೊಂಡರು.
ಆದರೆ ಹೆಚ್ಚಿನ ಆರೋಪ ಕೇಳಿಬಂದಿದ್ದು ಅಸಹಿಷ್ಣುತೆ ಬಗ್ಗೆ. ಸಮ್ಮೇಳನಾಧ್ಯಕ್ಷ ಪ್ರೊ. ಚಂದ್ರಶೇಖರ್ ಪಾಟೀಲ್, ಪ್ರೊ.ಬರಗೂರು ರಾಮಚಂದ್ರಪ್ಪ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ  ಪತ್ರಕರ್ತೆ ಗೌರಿ ಲಂಕೇಶ್ ಮತ್ತು ಸಾಹಿತಿ ಡಾ.ಎಂ.ಎಂ.ಕಲಬುರಗಿ ಅವರ ಹತ್ಯೆಯ ಬಗ್ಗೆ ಖೇದ ವ್ಯಕ್ತಪಡಿಸಿ ಸುಪಾರಿ ಸಂಸ್ಕೃತಿ ಬೆಳೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. 1980ರ ದಶಕದಲ್ಲಿ ಇದ್ದಂತೆ ಪ್ರಗತಿಪರ ಚಿಂತಕರಲ್ಲಿ ಒಗ್ಗಟ್ಟು ಇರಬೇಕು ಎಂದು ಮುಖ್ಯಮಂತ್ರಿ ಸೇರಿದಂತೆ ವೇದಿಕೆಯಲ್ಲಿ ಇತರ ಸಾಹಿತ್ಯ ವಲಯದ ಗಣ್ಯರು ಒತ್ತಾಯಿಸಿದರು.
ನಮ್ಮ ದೇಶದ ಪ್ರಜಾಪ್ರಭುತ್ವ ತತ್ವಗಳನ್ನು ಎತ್ತಿಹಿಡಿಯುವ ಜಾತ್ಯತೀತ ಪಕ್ಷಗಳಿಗೆ ಬೆಂಬಲ ನೀಡಬೇಕೆಂದು ಕರೆನೀಡಿದ ಸಮ್ಮೇಳನಾಧ್ಯಕ್ಷ ಪ್ರೊ.ಚಂಪಾ, ದೇಶ ಏಕಪಕ್ಷೀಯ ನಿರ್ಧಾರದಿಂದ ಮುನ್ನಡೆಯಲು ಸಾಧ್ಯವಿಲ್ಲ ಎಂದರು. ಬುದ್ಧಿಜೀವಿಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧ ನಡೆಯುವ ದಾಳಿಯನ್ನು ಬಲವಾಗಿ ಟೀಕಿಸಿದ ಅವರು, ಇದು ದೇಶ ವಿರೋಧಿ ಕೃತ್ಯ ಎಂದರು. ಪ್ರಾದೇಶಿಕ ವಿಚಾರಗಳಿಗೆ ಪ್ರಾಮುಖ್ಯತೆ ನೀಡುವ ದೇಶೀಯ ಪಕ್ಷಗಳಿಗೆ ಮತ ಹಾಕಬೇಕು ಎಂದು ಜನರಿಗೆ ಮನವಿ ಮಾಡಿದರು. ಕಳೆದ ದಶಕದಿಂದ ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲಿ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸಲಾಗುತ್ತಿದ್ದು, ಹಿಂದೆಯೇತರ ಭಾಷೆಗಳನ್ನು ಮಾತನಾಡುವ ಜನರ ಮೇಲೆ ಕೂಡ ಅದನ್ನು ಕಡ್ಡಾಯವಾಗಿ ಹೇರಲಾಗುತ್ತಿದೆ ಎಂದು ಆಪಾದಿಸಿದರು.
ನರೇಂದ್ರ ಮೋದಿಯವರ ಮನ್ ಕಿ ಬಾತ್ ಆಕಾಶವಾಣಿ ಕಾರ್ಯಕ್ರಮವನ್ನು ಉಲ್ಲೇಖಿಸಿದ ಅವರು, ಮೋದಿಯವರು ದೇಶದ ಪ್ರಧಾನ ಮಂತ್ರಿಯಂತೆ ವರ್ತಿಸಬೇಕೆ ಹೊರತು ಬಿಜೆಪಿಯ ಅಥವಾ ಗುಜರಾತ್ ರಾಜ್ಯವೊಂದರ ಪ್ರಧಾನಿಯಾಗಿಯಲ್ಲ ಎಂದು ಹೇಳಿದರು.
SCROLL FOR NEXT