ಬೀದರ್: ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ(ಎಮ್‍ಸಿಐ) ಅಧಿಕಾರಿಗಳ ಸೋಗಿನಲ್ಲಿ ವೈದ್ಯರಿಗೆ ಬೆದರಿಕೆ ಹಾಕಿ ಹಣ ಕೀಳುತ್ತಿದ್ದ ಐವರನ್ನು ಬೀದರ್ ಪೋಲೀಸರು ವಶಕ್ಕೆ ಪಡೆದಿದ್ದಾರೆ.
"ನಾವು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಅಧಿಕಾರಿಗಳೆಂದು" ಹೇಳಿಕೊಂಡಿದ್ದ ಐದು ಮಂದಿ ಬೆಂಗಳೂರಿನಿಂದ ಬೀದರ್ ಗೆ ಬಂದಿದ್ದರು. ಅವರು ಅಲ್ಲಿನ ಖಾಸಗಿ ಆಸ್ಪತ್ರೆ ಹಾಗೂ ನವ ಜೀವನ ಆಸ್ಪತ್ರೆ ವೈದ್ಯರ ಬಳಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ನೀವು ನಮಗೆ ಹಣ ಕೊಡದೇ ಹೋದಲ್ಲಿ ನಿಮ್ಮ ವಿರುದ್ಧ ಎಮ್‍ಸಿಐ ಗೆ ವರದಿ ಸಲ್ಲಿಸುವುದಾಗಿ ಬೆದರಿಸುತ್ತಿದ್ದರು.
ಬಂಧಿತರನ್ನು ಸುನೀಲ್ (31), ಜೀನಿತ್ (25), ಪುನೀತ್ (25), ವೆಂಕಟೇಶ್ವರ ಪ್ರಿಯದರ್ಶಿನಿ (40), ಮಂಜುಳಾ (26) ಎಂದು ಗುರುತಿಸಲಾಗಿದ್ದು ಕೆಲವು ದಿನಗಳಿಂದ ಬೀದರ್ ನಲ್ಲಿಯೇ ನೆಲೆಸಿದ್ದ ಖದೀಮ ತಂಡ ವೈದ್ಯರ ಬಗೆಗೆ ಮಾಹಿತಿ ಕಲೆಹಾಕಿದೆ. ಆ ನಂತರ ಈ ಕೃತ್ಯ ಎಸಗಿದೆ. ಇದೀಗ ತಂಡವು ಬೀದರ್ ಪೋಲೀಸರ ವಶದಲ್ಲಿದ್ದು ಪೋಲೀಸರು ತನಿಖೆ ಕೈಗೊಂಡಿದ್ದಾರೆ.