ಬೆಂಗಳೂರು: ಲಿಕ್ಕರ್ ಉದ್ಯಮಿ ಆದಿ ಕೇಶವಲು ಮೊಮ್ಮಗ ವಿಷ್ಣು ವಾಹನ ಅಪಘಾತ ಪ್ರಕರಣದಲ್ಲಿ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ. ಕಳೆದ ಕೆಲ ತಿಂಗಳುಗಳ ಹಿಂದೆ ಆತನ ಕಿರಿಯ ಸಹೋದರ ಮಾಡಿದ ತಪ್ಪಿನಿಂದಾಗಿ ಸುದ್ದಿಯಾಗಿದ್ದ.
ವಿಷ್ಣು ಕಿರಿಯ ಸಹೋದರ, ಆದಿ ನಾರಾಯಣ ರಾಜ ರಾಜೇಶ್ವರಿನಗರದಲ್ಲಿರುವ ಅಪಾರ್ಟ್ ಮೆಂಟ್ ಮುಂದೆ ಆತನ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ್ದ ಘಟನೆ ವರದಿಯಾಗಿದೆ.
ಏಪ್ರಿಲ್ 24 ರಂದು ವಿಷ್ಣು ಸಹೋದರ ಆದಿ ನಾರಾಯಣ, ತನ್ನ ಸ್ನೇಹಿತ ವಾಸವಿರುವ ಅಪಾರ್ಟ್ ಮೆಂಟ್ ಗೇಟ್ ಗೆ ತನ್ನ ಕಾರು ನುಗ್ಗಿಸಿದ್ದ, ಈ ವೇಳೆ ಗೇಟ್ ಮುಂಭಾಗವಿದ್ದ ಸೆಕ್ಯೂರಿಟಿ ಗಾರ್ಡ್ ಗಾಯಗೊಂಡಿದ್ದ. ಈ ವಿಷಯಕ್ಕೆ ಸಂಬಂಧಿಸಿದಂತೆ ಮೀನಾಕ್ಷಿ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದ ದರ್ಶನ್ ದ್ವಾರಕನಾಥ್ ಆದಿ ನಾರಾಯಣನ ವಿರುದ್ಧ ದೂರು ನೀಡಿದ್ದರು. ಅದರಂತೆ ಪೊಲೀಸರು ಆದಿನಾರಾಯಣನ ಕಾರನ್ನು ಸೀಜ್ ಮಾಡಿದ್ದರು.
ಯಾವುದೇ ಕಾರಣವಿಲ್ಲದೇ ಕುಡಿದ ಮತ್ತಿನಲ್ಲಿ ದರ್ಶನ್ ದ್ವಾರಕನಾಥ್ ವಾಸವಿದ್ದ ಅಪಾರ್ಟ್ ಮೆಂಟ್ ಗೇಟ್ ಗೆ ಆದಿನಾರಾಯಣ ತನ್ನ ಕಾರು ಗುದ್ದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಆದಿ ನಾರಾಯಣನನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿತ್ತು. 10 ದಿನಗಳ ನಂತರ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಎರಡು ವಾರಗಳ ಹಿಂದೆ ಆತನ ಸಹೋದರ ವಿಷ್ಣು, ಠಾಣೆಗೆ ಬಂದು, ನ್ಯಾಯಾಲಯದ ಆದೇಶ ನೀಡಿ , ಸೀಜ್ ಮಾಡಿದ್ದ ಕಾರನ್ನು ವಾಪಸ್ ತೆಗೆದುಕೊಂಡು ಹೋಗಿದ್ದ ಎಂದು ಪೊಲೀಸರು ಹೇಳಿದ್ದಾರೆ.
ನೀಡಿದ್ದ ದೂರನ್ನು ವಾಪಸ್ ತೆಗೆದುಕೊಳ್ಳುವಂತೆ ದರ್ಶನ್ ಕುಟುಂಬಕ್ಕೆ ಆದಿನಾರಾಯಣ ಬೆದರಿಕೆ ಹಾಕಿದ್ದಾನೆ, ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಿ ನಾರಾಯಣನ ವಿರುದ್ಧ ಸಾಕ್ಷಿಗಳನ್ನು ಪೊಲೀಸರಿಗೆ ನೀಡಲು ದರ್ಶನ್ ಹಿಂದೇಟು ಹಾಕುತ್ತಿದ್ದರು, ನಂತರ ಅವರ ಮನವೊಲಿಸಿರುವ ಪೊಲೀಸರು ದರ್ಶನ್ ಅವರಿಂಗ ಸಾಕ್ಷಿ ಸಂಗ್ರಹಿಸಿ, ಆದಿ ನಾರಾಯಣನ ವಿರುದ್ಧ ಚಾರ್ಜ್ ಶೀಟ್ ದಾಖಲಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.