ಬೆಂಗಳೂರು: ಕಾಂಗ್ರೆಸ್ ಮುಖಂಡರ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ ಹಿನ್ನಲೆಯಲ್ಲಿ ಐಟಿ ಆಧಿಕಾರಿಗಳ ವಿರುದ್ಧವೇ ರಾಜ್ಯ ಸರ್ಕಾರ ತನ್ನ ಭ್ರಷ್ಟಾಚಾರ ನಿಗ್ರಹ ದಳದ ಮೂಲಕ ದಾಳಿ ನಡೆಸಲು ಯೋಜನೆ ರೂಪಿಸಿತ್ತೇ?
ಇಂತಹುದೊಂದು ಪ್ರಶ್ನೆಗೆ ಕಾರಣವಾಗಿದ್ದು ಆದಾಯ ತೆರಿಗೆ ಇಲಾಖೆಯ ಹೆಚ್ಚುವರಿ ಮಹಾ ನಿರ್ದೇಶಕ ಬಿಆರ್ ಬಾಲಕೃಷ್ಣನ್ ಅವರ ಪತ್ರ...ಇತ್ತೀಚೆಗೆ ಬಿಆರ್ ಬಾಲಕೃಷ್ಣನ್ ಅವರು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಆರ್ ಕೆ ದತ್ತಾ ಅವರಿಗೆ ಪತ್ರವೊಂದನ್ನು ಬರೆದಿದ್ದು, ಪತ್ರದಲ್ಲಿ ಎಸಿಬಿ ಐಟಿ ಅಧಿಕಾರಿಗಳ ಮೇಲೆ ದಾಳಿ ಮಾಡಲು ಯಾವುದೇ ಅಧಿಕಾರವಿಲ್ಲ ಎಂದು ಹೇಳಿದೆ.
ಮಾಧ್ಯಮವೊಂದು ವರದಿ ಮಾಡಿರುವಂತೆ ಪತ್ರದಲ್ಲಿ ಬಾಲಕೃಷ್ಣನ್ ಅವರು, ಐಟಿ ಆಧಿಕಾರಿಗಳ ಮೇಲೆ ರಾಜ್ಯ ಸರ್ಕಾರ ತನ್ನ ಭ್ರಷ್ಟಾಚಾರ ನಿಗ್ರಹ ದಳದ ಮೂಲಕ ದಾಳಿಗೆ ಯೋಜನೆ ರೂಪಿಸಿರುವ ಕುರಿತು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಕೇಂದ್ರ ಗುಪ್ತಚರ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಬಿಆರ್ ಬಾಲಕೃಷ್ಣನ್ ಪತ್ರದಲ್ಲಿ ಉಲ್ಲೇಖ ಮಾಡಿದ್ದು, ಐಟಿ ಆಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ದೂರುಗಳು ಬಂದಿದ್ದರೆ, ಅವುಗಳ ಕುರಿತು ಕೇಂದ್ರ ಸರ್ಕಾರಕ್ಕೆ ಅಥವಾ ಐಟಿ ಇಲಾಖೆಯ ನಿರ್ದೇಶಕರಿಗೆ ದೂರು ನೀಡಲಿ. ಅದನ್ನು ಬಿಟ್ಟು ಅಧಿಕಾರಿಗಳ ಮೇಲೆ ದಾಳಿ ಮಾಡುವ ಯಾವುದೇ ರೀತಿಯ ಅಧಿಕಾರ ಎಸಿಬಿಗಾಗಲೀ ಅಥವಾ ರಾಜ್ಯ ಸರ್ಕಾರಕ್ಕೆ ಆಗಲಿ ಇಲ್ಲ ಎಂದು ಬಿಆರ್ ಬಾಲಕೃಷ್ಣನ್ ಅವರು ಪತ್ರದಲ್ಲಿ ಹೇಳಿದ್ದಾರೆ ಎನ್ನಲಾಗಿದೆ.
ಈ ಹಿಂದೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಪ್ರಭಾವಿ ಮುಖಂಡ ಡಿಕೆ ಶಿವಕುಮಾರ್ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರ ಮೇಲೆ ಈ ಹಿಂದೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಇಬ್ಬರು ಮುಖಂಡರ ಮೇಲೆ ಮಾತ್ರವಲ್ಲದೇ ಇವರ ಅನುಯಾಯಿಗಳು ಮತ್ತು ಸಂಬಂಧಿಕರ ಮನೆಗಳ ಮೇಲೂ ಐಟಿ ದಾಳಿಯಾಗಿತ್ತು. ಈ ಪ್ರಕರಣ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಜುಗರವನ್ನುಂಟು ಮಾಡಿತ್ತು. ಇದೀಗ ರಾಜ್ಯ ಸರ್ಕಾರ ಕಳೆದುಹೊದ ತನ್ನ ವರ್ಚಸ್ಸನ್ನು ಐಟಿ ಆಧಿಕಾರಿಗಳ ಮೇಲೆ ದಾಳಿ ಮಾಡುವ ಮೂಲಕ ಮರಳಿ ಪಡೆಯಲು ಯತ್ನಿಸುತ್ತಿದೆ ಎಂದು ಹೇಳಲಾಗಿದೆ.
ಇದೇ ಕಾರಣಕ್ಕೆ ಪ್ರಸ್ತುತ ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥರಾಗಿರುವ ಎಂಎನ್ ರೆಡ್ಡಿ ಅವರ ನೇತೃತ್ವದಲ್ಲಿ ಐಟಿ ಆಧಿಕಾರಿಗಳ ಮೇಲೆ ದಾಳಿ ನಡೆಸಲು ರಾಜ್ಯ ಸರ್ಕಾರ ಯೋಜನೆ ರೂಪಿಸಿತ್ತು ಎಂದು ಮಾಧ್ಯಮ ವರದಿಯಲ್ಲಿ ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics