ಪುತ್ಛಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಸುರಿಯುತ್ತಿರುವ ಭಾರೀ ಮಳೆಯ ನಡುವೆ ಸಿಎಂ ಸಿದ್ದರಾಮಯ್ಯ ಸರ್ಕಾರಿ ಉದ್ಯೋಗ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ. 70 ರಷ್ಟು ಮೀಸಲಾತಿ ಸೌಲಭ್ಯ ಒದಗಿಸುವ ಭರವಸೆ ನೀಡಿದ್ದಾರೆ.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಪ್ರತಿಮೆ ಅನಾವರಣ, ತಪೋವನ ಉದ್ಘಾಟನೆ ಹಾಗೂ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು,
ಪರಿಶಿಷ್ಟ ಜಾತಿ ಮತ್ತು ಪಂಗಡ ಮತ್ತು ಹಿಂದುಳಿದ ವರ್ಗದವರ ಒಟ್ಟಾರೆ ಮೀಸಲಾತಿ ಮಿತಿಯನ್ನು ಶೇ 50ರಿಂದ ಶೇ 70ಕ್ಕೆ ಹೆಚ್ಚಿಸಲು ಸರ್ಕಾರ ಬದ್ಧವಾಗಿದೆ ಎಂದರು.
ಪರಿಶಿಷ್ಟ ಜಾತಿಯವರಿಗೆ ಶೇ 15ರಷ್ಟು ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ 7.5ರಷ್ಟು ಮೀಸಲಾತಿ ಜಾರಿ ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಿದ ಅವರು ಇದನ್ನು ನಾನು ವೋಟಿಗಾಗಿ ಮಾಡುತ್ತಿಲ್ಲ, ಎಲ್ಲಾ ಸಮುದಾಯದವರಿಗೂ ಸಾಮಾಜಿಕ ನ್ಯಾಯ ಒದಗಿಸುವ ದೃಷ್ಟಿಯಿಂದ ಈ ಮೀಸಲಾತಿ ತರಲಾಗುವುದು ಎಂದರು. ದಲಿತರಿಗಾಗಿ ನಾವು ಈಗಾಗಲೇ 25 ಸಾವಿರ ಕೋಟಿ ಹಣ ಖರ್ಚು ಮಾಡಿದ್ದೇವೆ, ಈ ವರ್ಷ 7 ಸಾವಿರ ಕೋಟಿ ರು ಅನುದಾನ ಮೀಸಲಿಟ್ಟಿದ್ದೇವೆ ಎಂದು ತಿಳಿಸಿದರು.
ಚುನಾವಣಾ ಹೊಸ್ತಿಲಿನಲ್ಲಿರುವ ಸಿದ್ದರಾಮಯ್ಯ ಸರ್ಕಾರ, ವಿಧಾನಸೌಧ ಮತ್ತು ಶಾಸಕರ ಭವನದ ನಡುವೆ ಸುಮಾರು 1 ಕೋಟಿ ರು, ವ್ಯಯಿಸಿ 12 ಅಡಿ ಎತ್ತರದ ಮಹರ್ಷಿ ವಾಲ್ಮೀಕಿ ಪ್ರತಿಮೆ ನಿರ್ಮಿಸಿದೆ, ಸಚಿವರ ಜಾರಕಿಹೊಳಿ ಮಾತನಾಡಿ ಶೈಕ್ಷಣಿಕ ಕ್ಷೇತ್ರದಲ್ಲಿ ಶೇ.75 ರಷ್ಟು ಮೀಸಲಾತಿ ನೀಡಬೇಕು ಎಂದು ಸಿಎಂ ಸಿದ್ದರಾಮ.ಯ್ಯ ಅವರಿಗೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ತಿಪ್ಪೇಸ್ವಾಮಿ ಅವರಿಗೆ ‘ಮಹರ್ಷಿ ವಾಲ್ಮೀಕಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಶಾಸಕರ ಭವನದ ಆವರಣದಲ್ಲಿ ನಿರ್ಮಿಸಿರುವ ವಾಲ್ಮೀಕಿ ಪ್ರತಿಮೆ ಅನಾವರಣ ಬೆಳಿಗ್ಗೆ 10.30ಕ್ಕೆ ಮತ್ತು ವೇದಿಕೆ ಕಾರ್ಯಕ್ರಮ 11ಕ್ಕೆ ನಿಗದಿಯಾಗಿತ್ತು. ಆದರೆ, ಕಲಾ ಮೇಳಗಳ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಂದಾಗಿ ಕಾರ್ಯಕ್ರಮ ಆರಂಭವಾಗುವುದರೊಳಗೆ 12.30 ಆಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತು ಆರಂಭಿಸುವ ಮೊದಲೇ ಮಳೆ ಆರಂಭವಾಯಿತು. ಜನರೆಲ್ಲ ದಿಕ್ಕಾಪಾಲಾದರು. ಮಳೆ ನಿಲ್ಲಬಹುದು ಎಂದು ಗಣ್ಯರು ಸುಮಾರು ಅರ್ಧತಾಸು ವೇದಿಕೆ ಮೇಲೆಯೇ ಕಾದು ಕುಳಿತಿದ್ದರಾದರೂ, ರಭಸ ಇನ್ನಷ್ಟು ಜೋರಾದಾಗ ವರ್ಷಧಾರೆಯ ಮಧ್ಯೆಯೇ ಸಿದ್ದರಾಮಯ್ಯ ಮಾತು ಮುಗಿಸಿದರು.
ಮಧ್ಯಾಹ್ನ 1.15ರ ಸುಮಾರಿಗೆ ಆರಂಭವಾದ ಧಾರಾಕಾರ ಮಳೆ ಸಂಜೆ 4 ರವರೆಗೂ ಮುಂದುವರಿದಿತ್ತು. ಮಳೆ ಬರುತ್ತಿದ್ದಂತೆ ಜನರು ಕುಳಿತಿದ್ದ ಕುರ್ಚಿಯನ್ನೇ ತಲೆಯ ಮೇಲೆ ಇಟ್ಟುಕೊಂಡು ರಕ್ಷಣೆ ಪಡೆದರು. ವೇದಿಕೆ ಸುತ್ತಮುತ್ತ ಇದ್ದ ಫ್ಲೆಕ್ಸ್ ಗಳನ್ನು ಹರಿದು ಕೊಡೆ ರೀತಿ ಬಳಸಿ ರಕ್ಷಣೆ ಪಡೆದರು. ಮಹಿಳೆಯರು, ಮಕ್ಕಳನ್ನು ಎತ್ತಿಕೊಂಡು ಬಂದವರು, ವೃದ್ಧರು ವಿಧಾನಸೌಧದ ಆವರಣದಲ್ಲಿ ಯಾವ ಕಡೆ ಹೋಗಬೇಕು ಎಂದು ಗೊತ್ತಾಗದೆ ಪರದಾಡಿದರು.