ಬೆಂಗಳೂರು: ತಮ್ಮ ಪುತ್ರ ಸೂರಜ್ ಎಸ್. ನಾಯ್ಕ್ ಅವರಿಗೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಸಿದ್ದೇಶ್ವರನದುರ್ಗದಲ್ಲಿ ಗ್ರಾನೈಟ್ ಗಣಿಗಾರಿಕೆ ನಡೆಸಲು ಪರವಾನಗಿ ನೀಡಿಲ್ಲ ಎಂಬ ಕಾರಣಕ್ಕೆ ತಮಗೆ ಶಾಸಕರು ಬೆದರಿಕೆ ಹಾಕಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಖುಂಟಿಯಾ ಅವರಿಗೆ ಹಿರಿಯ ಐಎಎಸ್ ಅಧಿಕಾರಿ ರಾಜೇಂದ್ರ ಕುಮಾರ್ ಕಟಾರಿಯಾ ದೂರು ಸಲ್ಲಿಸಿದ್ದಾರೆ.
ದಾವಣೆಗೆರೆ ಮಾಯಕೊಂಡ ಶಾಸಕ ಶಿವಮೂರ್ತಿ ನಾಯ್ಕ್ ತಮಗೆ ಬೆದರಿಕೆ ಹಾಕಿದ್ದು, ಅಗತ್ಯ ರಕ್ಷಣೆ ನೀಡುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಕಟಾರಿಯಾ ಒತ್ತಾಯಿಸಿದ್ದಾರೆ.
ಶಾಸಕರು ತಮ್ಮ ಕಚೇರಿಗೆ ನುಗ್ಗಿ ಕೂಗಾಡಿದರು, ತಕ್ಷಣವೇ ಕಡತ ತರಿಸಿ ಗಣಿಗಾರಿಕೆಗೆ ಅನುಮೋದನೆ ನೀಡಬೇಕೆಂದು ಒತ್ತಡ ಹೇರಿದರು. ನಾನೇ ಸರ್ಕಾರ. ನೀನು ಸೇವಕ, ನನ್ನ ಆದೇಶವನ್ನು ಪಾಲಿಸಲೇಬೇಕು ಇಲ್ಲದಿದ್ದರೇ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಬೆದರಿಸಿ, ಎಂದು ಗದ್ದಲ ಎಬ್ಬಿಸಿದರು ಪತ್ರದಲ್ಲಿ ತಿಳಿಸಿದ್ದಾರೆ.
ಆರು ಎಕರೆ ಜಮೀನಿನಲ್ಲಿ ಗ್ರಾನೈಟ್ ಗಣಿಗಾರಿಕೆ ಪರವಾನಗಿಗಾಗಿ ಶಾಸಕರ ಪುತ್ರ ಸೂರಜ್ 2015ರ ಮಾರ್ಚ್ 24ರಂದು ಅರ್ಜಿ ಸಲ್ಲಿಸಿದ್ದರು. ಆದರೆ, 2016ರ ಕರ್ನಾಟಕ ಖನಿಜ ವಸ್ತುಗಳ (ತಿದ್ದುಪಡಿ) ನಿಯಮದ ಪ್ರಕಾರ ಈ ಅರ್ಜಿ ಪರಿಗಣನೆಗೆ ಅರ್ಹವಾಗಿಲ್ಲ, ಏಕೆಂದರೇ ಆಗಸ್ಟ್ 12, 2016 ರ ನಂತರಅರ್ಜಿ ಸಲ್ಲಿಸಿದವರಿಗೆ ಮಾತ್ರ ಲೀಸ್ ನೀಡಬೇಕೆಂಬ ನಿಯಮವಿದೆ ಹೀಗಾಗಿ ಪರವಾನಗಿ ನೀಡಲು ಸಾಧ್ಯವಿಲ್ಲ ಎಂದು ಕಟಾರಿಯಾ ಹೇಳಿದ್ದರು.
ಅದಾದ ನಂತರ ನಾಯ್ಕ್ ತಮ್ಮ ಅರ್ಜಿಯನ್ನು ಪರಿಗಣಿಸುವಂತೆ ಹೈಕೋರ್ಟ್ ನಲ್ಲಿ ಮನವಿ ಸಲ್ಲಿಸಿದರು. ಆಗಸ್ಟ್ 16 ರಂದು ನಿರ್ದೇಶನ ನೀಡಿದ ನ್ಯಾಯಾಲಯ ಆರು ವಾರಗಳಲ್ಲಿ ಅರ್ಜಿಯನ್ನು ವಿಲೇವಾರಿ ಮಾಡುವಂತೆ ಸೂಚಿಸಿತ್ತು, ನ್ಯಾಯಾಲಯದ ನಿರ್ದೇಶನದಂತೆ, ಸೆಪ್ಟಂಬರ್ 7 ರಂದು ಸೂರಜ್ ಎನ್ ಒಸಿ ನೀಡಲು ಸಮಯ ನೀಡುವಂತೆ ಕೋರಿದ್ದರು. ಹೀಗಾಗಿ ಈ ಪ್ರಕರಣ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಬಾಕಿ ಉಳಿದಿದೆ,
ಐಎಎಸ್ ಅಧಿಕಾರಿಗೆ ನಿಂದನೆ ಹಾಗೂ ಬೆದರಿಕೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಶಾಸಕ ಶಿವಮೂರ್ತಿ ನಾಯಕ್, ನಾನು ಅಧಿಕಾರಿ ವಿರುದ್ಧ ಯಾವುದೇ ಅಸಂಬದ್ಧ ಪದ ಬಳಕೆ ಮಾಡಿಲ್ಲ, ನಾನು ದಲಿತ ಎಂಬ ಕಾರಣಕ್ಕೆ ನನ್ನ ಪರವಾನಗಿ ಅರ್ಜಿಯನ್ನು ನಿರಾಕರಿಸಲಾಗಿದೆ, ನಾನು ನ್ಯಾಯ ಕೇಳು ಹೋಗಿದ್ದೆ. ಗಣಿ ಚಟುವಟಿಕೆಗಳಲ್ಲಿ ಯಾವುದೇ ದಲಿತರು ಭಾಗಿಯಾಗಿಲ್ಲ, ಎಸ್ ಸ್ಸಿ ಎಸ್ ಎಸ್ಟಿ ಕಲ್ಯಾಣ ಕಾಯಿದೆ ಅನುಗುಣವಾಗಿ ನಾನು ನನ್ನ ಹಕ್ಕನ್ನು ಕೇಳಿದ್ದೇನೆ ಎಂದು ಹೇಳಿದ್ದಾರೆ.
ಇನ್ನೂ ರಾಜೇಂದ್ರ ಕಟಾರಿಯಾ ಅವರ ಪತ್ರ ತಮ್ಮ ಕೈ ಸೇರಿದ್ದು, ಅದನ್ನು ಪರಿಶೀಲಿಸುವುದಾಗಿ ಸುಭಾಷ್ ಕುಂಟಿಯಾ ಹೇಳಿದ್ದಾರೆ.
ಕೆಲವು ತಿಂಗಳ ಹಿಂದೆ ಶಿವಮೂರ್ತಿ ನಾಯ್ಕ್ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಜಯ್ ಸೇಟ್ ಅವರ ಕಚೇರಿಗೆ ನುಗ್ಗಿ ತಾವು ನಡೆಸುತ್ತಿರುವ ಶಾಲೆಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಗದ್ದಲ ಮಾಡಿದ್ದರು ಎನ್ನಲಾದ ಪ್ರಕರಣ ವರದಿಯಾಗಿತ್ತು. ಈ ಬಗ್ಗೆಯೂ ಶಿಕ್ಷಣ ಸಚಿವ ತನ್ವೀರ್ ಸೇಠ್, ಮುಖ್ಯಮಂತ್ರಿಗೆ ದೂರು ನೀಡಿದ್ದರು.
ಶಿವಮೂರ್ತಿ ಅವರ ವರ್ತನೆ ಖಂಡಿಸಿರುವ ಐಎಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ಪಿ.ರವಿಕುಮಾರ್, ಇಂಥ ಘಟನೆಗಳು ಮರುಕಳಿಸದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.