ರಾಜ್ಯ

ಪ್ರಧಾನಿ ಮೋದಿಗೆ ಗಂಡಾಂತರ, ಕುಮಾರಸ್ವಾಮಿ ಸಿಎಂ ಆಗ್ತಾರಂತೆ: ಬ್ರಹ್ಮಾಂಡ ಗುರೂಜಿ ಭವಿಷ್ಯ

Lingaraj Badiger
ಹಾಸನ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗಂಡಾಂತರ ಕಾದಿದೆಯಂತೆ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ಎಂದು  ಎಂದು ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮಾ ಅವರು ಗುರುವಾರ ಭವಿಷ್ಯ ನುಡಿದಿದ್ದಾರೆ.
ಇಂದು ಹಾಸನದ ಹಾಸನಾಂಬೆ ದೇವಾಲಯದ ಬಾಗಿಲು ತೆರೆಯಲಾಯಿತು. ಈ ವೇಳೆ ಮಾತನಾಡಿದ ಬ್ರಹ್ಮಾಂಡ ಗುರೂಜಿ ಅವರು, ಪ್ರಧಾನಿ ಮೋದಿ ಅವರದು ವೃಶ್ಚಿಕ ರಾಶಿ, ಅವರಿಗೆ ಶನಿ ಚೆನ್ನಾಗಿಲ್ಲ. ಶನಿ ಕೂತಾಗ ಯಾರನ್ನೂ ಬಿಡಲ್ಲ. ಗುರು ತುಲಾ ರಾಶಿಗೆ ಪ್ರವೇಶ ಮಾಡಿದ್ದಾನೆ. ಹೀಗಾಗಿ ಉನ್ನತ ಸ್ಥಾನದಲ್ಲಿದ್ದು ಯಶೋಕೀರ್ತಿ ಹೊಂದಿರುವ ಸಿನಿಮಾ ಸ್ಟಾರ್ ಅಥವಾ ರಾಜಕಾರಣಿಗೆ ಗಂಡಾಂತರ ಕಾದಿದೆ. ಅವರು ದೇವರ ಮೊರೆಯಿಂದ ಪರಿಹಾರ ಕಂಡುಕೊಳ್ಳದೇ ಹೋದ್ರೆ ಮೃತ್ಯು ಕೂಡ ಎದುರಾಗಬಹುದು ಎಂದಿದ್ದಾರೆ.
ತಾಯಿಯಿಂದ, ಹೆಣ್ಣಿಂದ( ಪತ್ನಿ) ದೂರ ಇರುವ ಪ್ರಧಾನಿಗೆ ಶುಕ್ರನಿಂದಲೂ ದೋಷ ಇದೆ. ಗುಜರಾತ್‌ನ ಮಹಿಳೆಯೊಬ್ಬಳು ಮೋಹಿಸಲಿದ್ದಾಳೆ. ಇದೇ ಮೋದಿಗೆ ಮುಳುವಾಗಲಿದೆ ಎಂದು ಬ್ರಹ್ಮಾಂಡ ಗುರೂಜಿ ಭವಿಷ್ಯ ಹೇಳಿದ್ದಾರೆ.
ಇನ್ನು ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ಮಾಮಿ ಅವರೇ ಕಿಂಗ್ ಮೇಕರ್ ಆಗಲಿದ್ದಾರೆ. ಅವರ ಮೇಲೆ ಉತ್ತರ ಕರ್ನಾಟಕ ಜನ ನಂಬಿಕೆ ಇಟ್ಟಿದ್ದಾರೆ. ಆದರೆ ಅವರು ತಂದೆ ಮಾತು ಕೇಳಬೇಕು. ಆರೋಗ್ಯ ಕಾಪಾಡಿಕೊಳ್ಳಬೇಕು. ಮತ್ತೊಮ್ಮೆ ಸಿಎಂ ಆಗೋ ಯೋಗ ಅವರಿಗಿದೆ ಎಂದರು. ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈವರೆಗೆ ಮಾಡಿರುವ ತಪ್ಪು ಸರಿಪಡಿಸಿಕೊಳ್ಳಬೇಕು. ಅವರ ಸುತ್ತಮುತ್ತ ಕೆಲವು ಕಚಡಾ ಮಂತ್ರಿಗಳಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಸ್ಥಾನಪಲ್ಲಟ ಖಚಿತ, ಅವರ ಪಕ್ಷದಲ್ಲೇ ಅವರನ್ನು ಮುಗಿಸೋ ಹುನ್ನಾರ ನಡಯುತ್ತಿದೆ. ಯಡಿಯೂರಪ್ಪ ಅವರದು ಹಿತ್ತಾಳೆ ಕಿವಿ. ವಿಷವನ್ನು ಪಕ್ಕದಲ್ಲೇ ಇಟ್ಟುಕೊಂಡು ಓಡಾಡುತ್ತಿದ್ದು, ಇದನ್ನು ನಿವಾರಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
SCROLL FOR NEXT