ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾರ್ಮಿಕರು ಮತ್ತು ರಾಷ್ಟ್ರೀಯ ವಿಪತ್ತು ಕಾರ್ಯಪಡೆ, ರಾಜ್ಯ ವಿಪತ್ತು ಕಾರ್ಯಪಡೆ ಸಿಬ್ಬಂದಿ ರಕ್ಷಣಾ ಮತ್ತು ಶೋಧ ಕಾರ್ಯ ನಡೆಸುತ್ತಿರುವುದು
ಬೆಂಗಳೂರು: ನಗರದಲ್ಲಿ ಕೆಲ ದಿನಗಳಿಂದ ಸುರಿದ ಭಾರೀ ಮಳೆಗೆ ಪ್ರವಾಹ ಉಂಟಾಗಿ 5 ಮಂದಿ ನಾಗರಿಕರು ಮೃತಪಟ್ಟ ನಂತರ ಎಚ್ಚೆತ್ತುಕೊಂಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರನ್ನು ಹತ್ತಿರದ ಶಾಲೆ ಮತ್ತು ಸಮುದಾಯ ಭವನಗಳಿಗೆ ಸ್ಥಳಾಂತರಿಸುತ್ತಿದೆ.
ಇತ್ತೀಚೆಗೆ ಸುರಿದ ಭಾರೀ ಮಳೆಗೆ ಐವರು ಮೃತಪಟ್ಟಿದ್ದು ಅವರಲ್ಲಿ ಮೂವರು ಕುರುಬರಹಳ್ಳಿಯ ನಿವಾಸಿಗಳಾಗಿದ್ದಾರೆ. ಇವರೆಲ್ಲ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿದ್ದರು.
ಶಾಲೆ, ಸಮುದಾಯ ಭವನಗಳಿಗೆ ಸ್ಥಳಾಂತರಗೊಂಡ ಜನರಿಗೆ ಮಳೆಯ ಪ್ರಮಾಣ ಕಡಿಮೆಯಾಗುವವರೆಗೆ ಆಹಾರ, ಬೆಡ್ ಶೀಟ್, ವೈದ್ಯಕೀಯ ಸೌಲಭ್ಯಗಳನ್ನು ಮುಂದಿನ ಮೂರ್ನಾಲ್ಕು ದಿನಗಳವರೆಗೆ ಒದಗಿಸುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.
ಕುರುಬರಹಳ್ಳಿ ಮತ್ತು ನಾಯಂಡಹಳ್ಳಿಯ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರಿಗೆ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವಂತೆ ಸೂಚಿಸಲಾಗಿದೆ.
ನಿನ್ನೆ ರಾತ್ರಿಯಿಂದ ಕುರುಬರಹಳ್ಳಿ ಮತ್ತು ಇತರ ಸ್ಥಳಗಳಿಗೆ ಭೇಟಿ ನೀಡಿರುವ ಮೇಯರ್ ಸಂಪತ್ ರಾಜ್ ಮುಂದಿನ ಮೂರ್ನಾಲ್ಕು ದಿನ ಭಾರೀ ಮಳೆ ಬೀಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ತಗ್ಗು ಪ್ರದೇಶದ ಜನರನ್ನು ಹತ್ತಿರದ ಬಿಬಿಎಂಪಿ ಶಾಲೆಗಳಿಗೆ, ಬಿಬಿಎಂಪಿ ಸಮುದಾಯ ಭವನಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಂಪುಟದ ಹಿರಿಯ ಸಚಿವರುಗಳಾದ ಡಿ.ಕೆ.ಶಿವಕುಮಾರ್, ರಾಮಲಿಂಗಾ ರೆಡ್ಡಿ, ಕೆ,ಜೆ.ಜಾರ್ಜ್ ಅವರೊಂದಿಗೆ ಕುರುಬರಹಳ್ಳಿಗೆ ಭೇಟಿ ನೀಡಿದ್ದಾರೆ. ಇಲ್ಲಿ ನಿನ್ನೆ ಮಳೆಗೆ ಮೂವರು ಮೃತಪಟ್ಟಿದ್ದಾರೆ, ನಿನ್ನೆ ಸಂಜೆ ಮತ್ತಿಬ್ಬರು ಕೊಚ್ಚಿ ಹೋಗಿರಬಹುದು ಎಂದು ಸಂದೇಹ ವ್ಯಕ್ತಪಡಿಸಲಾಗಿದೆ.
ಇಂದು ಕುರುಬರಹಳ್ಳಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಮತ್ತು ಇತರ ಬಿಜೆಪಿ ನಾಯಕರಿದ್ದರು.