ರಾಜ್ಯ

ಬೆಂಗಳೂರು: ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಅರ್ಚಕರ ಮೃತದೇಹ ಪತ್ತೆ

Srinivasamurthy VN
ಬೆಂಗಳೂರು: ಶುಕ್ರವಾರ ಸುರಿದ ಭಾರಿ ಮಳೆಯಲ್ಲಿ ಕೊಚ್ಚಿ ಹೋಗಿದ್ದ ವೆಂಕಟರಮಣಸ್ವಾಮಿ ದೇವಾಲಯ ಅರ್ಚಕ ವಾಸುದೇವ್  ಅವರ ಮೃತದೇಹ ಶನಿವಾರ ಬೆಳಗ್ಗೆ ಪತ್ತೆಯಾಗಿದೆ.
ನಿನ್ನೆ ಬೆಂಗಳೂರಿನ ಕುರುಬರ ಹಳ್ಳಿಯ ವೆಂಕಟರಮಣಸ್ವಾಮಿ ದೇವಾಲಯ ಅರ್ಚಕ ವಾಸುದೇವ್ ಅವರು ನಡೆದುಕೊಂಡು ಹೋಗುತ್ತಿದ್ದಾಗ ಫುಟ್ ಪಾತ್ ಮೇಲಿನ ಸ್ಲಾಬ್ ಮುರಿದು ಅವರು ಮಳೆ ನೀರಿನಲ್ಲಿ ಕೊಚ್ಚಿಕೊಂಡು  ಹೋಗಿದ್ದರು. ನಾಪತ್ತೆಯಾಗಿದ್ದ ಅರ್ಚಕ ವಾಸುದೇವ್ ಅವರಿಗಾಗಿ ರಾತ್ರಿ ಇಡೀ ಶೋಧ ನಡೆಸಲಾಗಿತ್ತು. ಅಗ್ನಿಶಾಮಕ ದಳ ಹಾಗೂ ಎಸ್ ಡಿಆರ್ ಎಫ್ ತಂಡದ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದರು. ಇದೀಗ ಅರ್ಚಕ  ವಾಸುದೇವ್ ಅವರು ಶವವಾಗಿ ಪತ್ತೆಯಾಗಿದ್ದು, ಘಟನೆ ನಡೆದ ಸ್ಥಳಕ್ಕಿಂತ ಅರ್ಧ ಕಿಲೋ ಮೀಟರ್ ದೂರದ ಸುಮನಹಳ್ಳಿಯ ಬಿಡ್ಜ್ ಬಳಿಯ ರಾಜಕಾಲುವೆಯಲ್ಲಿ ಅರ್ಚಕ ವಾಸುದೇವ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಶುಕ್ರವಾರ ಸಂಜೆ ಕುರುಬರಹಳ್ಳಿಯ ವರಸಿದ್ಧಿ ವಿನಾಯಕ ಹಾಗೂ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಬಳಿಯ ರಸ್ತೆಯ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ಅರ್ಚಕ ವಾಸುದೇವ್ ಮಳೆ ನೀರುಗಾಲುವೆಯಲ್ಲಿ  ಕೊಚ್ಚಿ ಹೋಗಿದ್ದರು. ಅರ್ಚಕ ವಾಸುದೇವ್  ಅವರು ದೇವಸ್ಥಾನದಿಂದ, ಹಿಂಭಾಗದಲ್ಲಿರುವ ತಮ್ಮ ಮನೆಗೆ ಹಿಂದಿರುಗುವಾಗ ಈ ದುರ್ಘಟನೆ ನಡೆದಿತ್ತು. 
SCROLL FOR NEXT