ಬೆಂಗಳೂರು: ನಗರದ ಹೊಸೂರು ರಸ್ತೆಯ ಎಲಿವೇಟೆಡ್ ಮೇಲ್ಸೇತುವೆಯಲ್ಲಿ ವೇಗವಾಗಿ ಬಂದ ಉಬರ್ ಕ್ಯಾಬ್ ಹಿಂದಿನಿಂದ ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ಮೇಲ್ಸೇತುವೆಯಿಂದ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ನಿನ್ನೆ ಸಾಯಂಕಾಲ ನಡೆದಿದೆ.
ಆಸ್ಟೀನ್ ಟೌನ್ ನಿವಾಸಿಗಳಾದ ಜಹೀರ್ ಹುಸೇನ್ ಮತ್ತು ಫಕ್ರುವುದ್ದೀನ್ ಮೃತ ದುರ್ದೈವಿಗಳು, ಮಡಿವಾಳದಿಂದ ಎಲೆಕ್ಟ್ರಾನಿಕ್ ಸಿಟಿ ಕಡೆಗೆ ತನ್ನ ಸಂಬಂಧಿಕನ ಜೊತೆ ಹುಸೇನ್ ಹೋಗುತ್ತಿದ್ದಾಗ ಘಟನೆ ನಡೆದಿದೆ. ಉಬರ್ ಚಾಲಕ ಪರಾರಿಯಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರು ರಿಯಲ್ ಎಸ್ಟೇಟ್ ಏಜೆಂಟ್ ಗಳಾಗಿದ್ದರು.
ಅಪಘಾತದ ದೃಶ್ಯ ಮೇಲ್ಸೇತುವೆ ಹತ್ತಿರದ ಕಟ್ಟಡವೊಂದರ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೃತ್ಯ ಎಸಗಿ ಪರಾರಿಯಾಗಿರುವ ಕ್ಯಾಬ್ ಚಾಲಕನನ್ನು ಪತ್ತೆ ಹಚ್ಚಲು ಕ್ಯಾಬ್ ನೋಂದಣಿ ಸಂಖ್ಯೆ ಆಧರಿಸಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಉಬರ್ ಕಂಪೆನಿಗೂ ತೆರಳಿ ದಾಖಲಾತಿ ಪರಿಶೀಲಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಡಿವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.