ರಾಜ್ಯ

ಗಾಯನ ನಿಲ್ಲಿಸಲಿರುವ ಗಾನ ಕೋಗಿಲೆ, ಮೈಸೂರಿನಲ್ಲಿ ಎಸ್.ಜಾನಕಿಯ ಕಡೆಯ ಸಂಗೀತ ಸಂಜೆ

Raghavendra Adiga
ಮೈಸೂರು: ಗಾನ ಕೋಗಿಲೆ ಎಸ್‌. ಜಾನಕಿ, 65 ವರ್ಷಗಳ ಬಳಿಕ ತಮ್ಮ ಗಾನಪಯಣಕ್ಕೆ ವಿದಾಯ ಹೇಳಲಿದ್ದಾರೆ. ಮೈಸೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದೊಂದಿಗೆ ತಮ್ಮ ಸುದೀರ್ಘ ಸಂಗೀತ ಯಾನವನ್ನು ಕೊನೆಗೊಳಿಸಲಿದ್ದಾರೆ. 
ಅ.28 ರಂದು ಮೈಸೂರು ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಜಾನಕಿ ಅವರು ತಮ್ಮ ಜೀವನದ ಕೊನೆಯ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಘೋಷಿಸಿದ್ದಾರೆ. 
"ನನಗೀಗ ವಯಸ್ಸಾಗಿದೆ. ಮೇಲಾಗಿ, ಈ ವಯಸ್ಸಿನಲ್ಲಿ ಹಾಡುವುದನ್ನು ನಿಲ್ಲಿಸಿದರೆ ಉತ್ತಮ ಎಂದೆನಿಸಿದೆ. ಹಾಗಾಗಿ, ಮೈಸೂರಿನಲ್ಲಿ ನಡೆಯಲಿರುವ ಕಾರ್ಯಕ್ರಮವೇ ನನ್ನ ಕೊನೆಯ ಬಹಿರಂಗ ಗಾಯನ ಕಾರ್ಯಕ್ರಮ'' ಎಂದು ಖ್ಯಾತ ಗಾಯಕಿ ಜಾನಕಿ ಹೇಳಿದರು.
'ಈಗ ಹಾಡುವವರು ಅನೇಕ ಮಂದಿ ಇದ್ದಾರೆ. ಇಂದಿನ ಮಕ್ಕಳು ಅದ್ಭುತವಾಗಿ ಹಾಡುತ್ತಿದ್ದಾರೆ.'' ಜಾನಕಿ ನುಡಿದರು.
ಕಳೆದ ವರ್ಷ ಜಾನೈಕಿ ಅವರು ಸಿನಿಮಾ ಗಾಯನಕ್ಕೆ ವಿದಾಯ ಹೇಳಿದ್ದರು. ಮಲಯಾಳಂನ "ಪತು ಕಲ್ಪನಾಕಳ್‌' ಚಿತ್ರದಲ್ಲಿ "ಅಮ್ಮಾಪೂವಿನುಂ' ಎಂಬ ಹಾಡು ಅವರ ಸಿರಿಕಂಠದಿಂದ ಮೂಡಿ ಬಂದ ಕಡೆಯ ಸಿನಿಮಾ ಗೀತೆಯಾಗಿತ್ತು.
ಮೊದಲ, ಕಡೆಯ ಕಾರ್ಯಕ್ರಮಗಳೆರಡೂ ಮೈಸೂರಿನಲ್ಲಿ!
ವಿಶೇಷವೆಂದರೆ ಎಸ್. ಜಾನಕಿ ಅವರ  ಮೊಟ್ಟ ಮೊದಲ ಸಂಗೀತ ಸಂಜೆ ಕಾರ್ಯಕ್ರಮ ಮೈಸೂರಿನಲ್ಲೇ ಆಯೋಜಿಸಲ್ಪಟ್ಟಿತ್ತು. ಇದೀಗ ಕೊನೆಯ ಕಾರ್ಯಕ್ರಮ ಸಹ ಇಲ್ಲಿಯೇ ನಡೆಯುತ್ತಿದೆ. 1952ರಲ್ಲಿ ಅಂದಿನ ಪ್ರಖ್ಯಾತ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್‌ ಅವರಿಂದ ಆಯೋಜಿಸಲ್ಪಟ್ಟಿದ್ದ ಸಂಗೀತ ಸಂಜೆ ಜಾನಕಿ, ಪಿ..ಬಿ. ಶ್ರೀನಿವಾಸ್‌ ಜತೆ ಹಾಡಿದ್ದರು. 
ಗಾನ ಕೋಗಿಲೆ ಎಸ್. ಜಾನಕಿ ಅವರು ತಮ್ಮ ಕಡೆಯ ಕಾರ್ಯಕ್ರಮದ ದಿನ ಮೈಸೂರಿನಲ್ಲಿ ರಾಜಮಾತೆ ಪ್ರಮೋದಾದೇವಿ ಅವರಿಂದ ಸನ್ಮಾನವನ್ನು ಸ್ವೀಕರಿಸಲಿದ್ದಾರೆ ಎಂದು ಅಂದಿನ ಕಾರ್ಯಕ್ರಮ ಆಯೋಜಕರು ತಿಳಿಸಿದ್ದಾರೆ.
SCROLL FOR NEXT