ರಾಜ್ಯ

ಬೆಂಗಳೂರು: ಗಗನಕ್ಕೇರಿದ ಟೊಮ್ಯಾಟೊ, ಕೊತ್ತಂಬರಿ ಸೊಪ್ಪು ಬೆಲೆ

Sumana Upadhyaya
ಬೆಂಗಳೂರು: ನಗರದ ಬಹುತೇಕ ಮನೆಗಳ ಆಹಾರ ಪದಾರ್ಥಗಳಲ್ಲಿ ಪ್ರಮುಖವಾಗಿರುವ ಟೊಮ್ಯಾಟೊ, ಮೆಣಸು, ಕೊತ್ತಂಬರಿ ಸೊಪ್ಪು ಕಡಿಮೆಯಾಗಿರಬಹುದು. ಕಳೆದ 15 ದಿನಗಳಿಂದ ಈ ತರಕಾರಿಗಳ ಬೆಲೆ ಗಗನಕ್ಕೇರಿದೆ. ಕಳೆದ ಎರಡು ತಿಂಗಳಲ್ಲಿ ರಾಜ್ಯಾದ್ಯಂತ ಭಾರೀ ಮಳೆಯಾಗಿರುವುದರಿಂದ ತರಕಾರಿಗಳು ಬಹುತೇಕ ಕೊಳೆತುಹೋಗಿ ಪೂರೈಕೆ ಕುಂಠಿತವಾಗಿದೆ. ಇದರಿಂದ ಬೆಂಗಳೂರಿನಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ.
ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಬೆಲೆ ಕಿಲೋಗೆ 22 ರೂಪಾಯಿಯಿಂದ 40 ರೂಪಾಯಿಗೆ ಏರಿಕೆಯಾಗಿದೆ. ಹಾಪ್ ಕಾಮ್ಸ್ ನಲ್ಲಿ ಟೊಮ್ಯಾಟೊ ಬೆಲೆ 22 ರೂಪಾಯಿಯಿಂದ 49 ರೂಪಾಯಿಗಳಾಗಿದೆ. ಹಸಿಮೆಣಸಿನಕಾಯಿ ಬೆಲೆ 40 ರೂಪಾಯಿಗಳಿಂದ ಕಳೆದ 15 ದಿನಗಳಲ್ಲಿ 80 ರೂಪಾಯಿಗೆ ಏರಿಕೆಯಾಗಿದೆ. ಕೊತ್ತಂಬರಿ ಸೊಪ್ಪಿನ ಬೆಲೆಯಂತೂ ಸಾಮಾನ್ಯ ಜನತೆಗೆ ಕೈಗೆಟಕದಂತಾಗಿದೆ. ಒಂದು ಕಟ್ಟು ಕೊತ್ತಂಬರಿ ಸೊಪ್ಪು ಬೆಲೆ 25 ರೂಪಾಯಿಯಿಂದ 50 ರೂಪಾಯಿಗೆ ಹೆಚ್ಚಾಗಿದೆ. ಇದರಿಂದಾಗಿ ಜನರು ತರಕಾರಿ ಕೊಳ್ಳುವ ಪ್ರಮಾಣ ಕಡಿಮೆಯಾಗುತ್ತಿದೆ. ಇನ್ನೂ 15 ದಿನಗಳವರೆಗೆ ಈ ಬೆಲೆ ಮುಂದುವರಿಯಲಿದೆ ಎನ್ನಲಾಗಿದೆ.
ಮಂಗಳೂರು, ಮೈಸೂರು, ಹುಬ್ಬಳ್ಳಿಗಳಲ್ಲಿ ಕೂಡ ತರಕಾರಿ ಬೆಲೆ ಜಾಸ್ತಿಯಾಗಿದೆ. ಅನಿಯಮಿತ ಮಳೆಯೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ. ಮಳೆ ಹೆಚ್ಚಾಗಿದ್ದರಿಂದ ಮತ್ತು ಸೂಕ್ತ ಕಾಲಕ್ಕೆ ಸರಿಯಾಗಿ ಮಳೆ ಬಾರದ್ದರಿಂದ ಬೆಳೆಯಾಗದೆ ತರಕಾರಿಗಳ ಬೆಳೆ ಕುಂಠಿತವಾಗಿದೆ. ಹಾಪ್ ಕಾಮ್ಸ್ ಮಾಜಿ ಅಧ್ಯಕ್ಷ ಜಿ.ಆರ್.ಶ್ರೀನಿವಾಸ್, ಮಳೆ ಜಾಸ್ತಿಯಾದಾಗಲೆಲ್ಲ ಬೆಳೆಗಳು ನಾಶವಾಗುತ್ತವೆ. ಮುಂದಿನ ಬೆಳೆ ಸರಿಯಾಗಿ ಬೆಳೆದು ಕೈಗೆ ಸಿಗಲು 2 ತಿಂಗಳು ಬೇಕಾಗಬಹುದು. ಅಲ್ಲಿಯವರೆಗೆ ತರಕಾರಿ ಬೆಲೆ ಹೀಗೆ ಏರಿಳಿತವಾಗುತ್ತಿರಬಹುದು ಎನ್ನುತ್ತಾರೆ.
SCROLL FOR NEXT