ರಾಜ್ಯ

ನಕಲಿ ಛಾಪಾ ಕಾಗದ ಹಗರಣದ ಆರೋಪಿ ತೆಲಗಿ ಆರೋಗ್ಯಸ್ಥಿತಿ ಗಂಭೀರ!

Srinivasamurthy VN
ಬೆಂಗಳೂರು: ನಕಲಿ ಛಾಪಾ ಕಾಗದ ಹಗರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಬ್ದುಲ್ ಕರೀಂ ಲಾಲ್ ತೆಲಗಿ (66 ವರ್ಷ) ಆರೋಗ್ಯದಲ್ಲಿ ತೀವ್ರ ವ್ಯತ್ಯಯವಾಗಿದ್ದು, ಆತನ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಸಕ್ಕರೆ ಕಾಯಿಲೆ, ಬಿಪಿ ಮತ್ತು ಇತರೆ ಬಹು ಅಂಗಾಂಗ ವೈಫಲ್ಯದಿಂದಾಗಿ ಬಳಲುತ್ತಿರುವ ಅಬ್ದುಲ್ ಕರೀಂ ಲಾಲ್ ತೆಲಗಿ ಆರೋಗ್ಯ ಸೋಮವಾರ ರಾತ್ರಿ ಗಂಭೀರವಾಗಿತ್ತು. ಹೀಗಾಗಿ ರಾತ್ರಿ 8 ಗಂಟೆ ಸುಮಾರಿನಲ್ಲಿ ಆತನನ್ನು ಇಲ್ಲಿನ  ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ತೆಲಗಿಗೆ ಪ್ರಸ್ತುತ ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕೃತಕ ಉಸಿರಾಟ (ವೆಂಟಿಲೇಟರ್) ಮೂಲಕ ತುರ್ತು ಚಿಕಿತ್ಸೆ  ನೀಡಲಾಗುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
 ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಅಬ್ದುಲ್ ಕರೀಂ ಲಾಲ ತೆಲಗಿ ಅವರಿಗೆ ಅನಾರೋಗ್ಯದ ಕಾರಣ ಅ.16 ರಂದು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತಿತ್ತು.  ಎರಡು ದಿನಗಳಿಂದ ವಿಕ್ಟೋರಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಸೋಮವಾರ ರಾತ್ರಿ 8 ಗಂಟೆಯಿಂದ ಅವರು ಗಂಭೀರ ಸ್ಥಿತಿಗೆ ತಲುಪಿರುವ ಹಿನ್ನಲೆಯಲ್ಲಿ ವೆಂಟಿಲೇಟರ್  ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.
ಅಬ್ದುಲ್ ಕರೀಂ ಲಾಲ್ ತೆಲಗಿ ಬಹುಕೋಟಿ ಛಾಪಾ ಕಾಗದ ಹಗರಣದ ಪ್ರಕರಣದಲ್ಲಿ 2002 ರಿಂದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದು, ಅವರಿಗೆ ಮಧುಮೇಹ, ಬಿಪಿ, ಉಸಿರಾಟಗ ತೊಂದರೆ ಸೇರಿದಂತೆ ಇನ್ನಿತರೆ ಕಾಯಿಲೆಗಳಿಂದ  ಬಳಲುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
SCROLL FOR NEXT