ಬೆಂಗಳೂರು: ದೇಶದ 2ನೇ ಅತೀ ದೊಡ್ಡ ಹಾಲಿನ ಉತ್ಪನ್ನಗಳ ತಯಾರಿಕಾ ಮತ್ತು ಮಾರಾಟ ಸಂಸ್ಥೆ ಕೆಎಂಎಫ್ ನ ಆದಾಯ ಜಿಎಸ್ ಟಿ ಜಾರಿ ಬಳಿಕ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ.
ಕೆಎಂಎಫ್ ಮೂಲಗಳು ತಿಳಿಸಿರುವಂತೆ ಹೊರ ರಾಜ್ಯಗಳಲ್ಲಿ ನಂದಿನಿ ಉತ್ಪನ್ನಗಳ ಮಾರಾಟ ಪ್ರಮಾಣದಲ್ಲಿ ಶೇ.30ರಷ್ಟು ಪ್ರಗತಿ ಕಂಡುಬಂದಿದ್ದು, ಜಿಎಸ್ ಟಿ ಜಾರಿ ಕಾಶ್ಮೀರ, ಚೆನ್ನೈ, ದೆಹಲಿ, ಕೋಲ್ಕತಾ ಸೇರಿದಂತೆ ದೇಶದ ಪ್ರಮುಖ ನಗರದಲ್ಲಿ ನಂದಿನಿ ಉತ್ಪನ್ನ ಮಾರಾಟಕ್ಕೆ ನೆರವಾಗಿದೆ. ಜಿಎಸ್ ಟಿ ಜಾರಿಗೂ ಮೊದಲು ಕರ್ನಾಟಕ ಸರ್ಕಾರ ನಂದಿನಿ ಉತ್ಪನ್ನಗಳ ಮೇಲೆ ಶೇ.14ರಷ್ಟು ತೆರಿಗೆ ವಿಧಿಸುತ್ತಿತ್ತು. ಇದೀಗ ಏಕರೂಪದ ತೆರಿಗೆ ವ್ಯವಸ್ಥೆ ಜಾರಿ ಬಳಿಕ ನಂದಿನಿ ಉತ್ಪನ್ನಗಳ ಮಾರಾಟ ಪ್ರಮಾಣ ಹೆಚ್ಚಾಗಿದೆ.
ಈ ಹಿಂದೆ ಸುಮಾರು 1500 ಟನ್ ಗಳಷ್ಟು ಮಾರಾಟವಾಗುತ್ತಿದ್ದ ನಂದಿನಿ ಉತ್ಪನ್ನಗಳು ಜಿಎಸ್ ಟಿ ಜಾರಿ ಬಳಿಕ 1800 ಗಳಷ್ಟು ಮಾರಾಟವಾಗುತ್ತಿದೆ. ಅಂತೆಯೇ 200 ಟನ್ ಗಳಷ್ಟು ಮಾರಾಟವಾಗುತ್ತಿದ್ದ ನಂದಿನಿ ಬೆಣ್ಣೆ ಇದೀಗ 400 ಟನ್ ಗಳಷ್ಟು ಮಾರಾಟವಾಗುತ್ತಿದೆ. ಕೇವಲ ಬೆಣ್ಣೆ ಮಾತ್ರವಲ್ಲದೇ ತುಪ್ಪ, ಹಾಲಿನ ಪುಡಿ ಸೇರಿದಂತೆ ವಿವಿಧ ನಂದಿನಿ ಉತ್ಪನ್ನಗಳ ಮಾರಾಟ ಪ್ರಮಾಣದಲ್ಲಿ ಕೂಡ ಗಣನೀಯ ಪ್ರಮಾಣದ ಏರಿಕೆ ಕಂಡುಬಂದಿದೆ. ನಂದಿನಿ ಗುಡ್ ಲೈಫ್ ಹಾಲಿನ ಉತ್ಪನ್ನಕ್ಕೂ ಬೇಡಿಕೆ ಹೆಚ್ಚಾಗಿದ್ದು, ಭಾರತೀಯ ಸೇನೆಯಿಂದ ಸುಮಾರು 1 ಕೋಟಿ ಲೀಟರ್ ಗುಡ್ ಲೈಫ್ ಹಾಲಿಗೆ ಬೇಡಿಕೆ ಬಂದಿದೆ. ಮುಂದಿನ ದಿನಗಳಲ್ಲಿ ಈ ಬೇಡಿಕೆ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ
ಎಂದು ಕೆಎಂಎಫ್ ಮಾರ್ಕೆಟಿಂಗ್ ವಿಭಾಗದ ನಿರ್ದೇಶಕ ಮೃತ್ಯುಂಜಯ ಕುಲಕರ್ಣಿ ಹೇಳಿದ್ದಾರೆ.
ಇದಕ್ಕೂ ಮೊದಲು ಹಾಲಿನ ಮಾರಾಟ ಪ್ರಕ್ರಿಯೆ ಕೊಂಚ ಕಠಿಣವಾಗಿತ್ತು. ಉತ್ಪನ್ನಗಳ ದರ ರಾಜ್ಯದಿಂದ ರಾಜ್ಯಕ್ಕೆ ಬೇರೆ ಬೇರೆಯಾಗಿರುತ್ತಿತ್ತು. ಆದರೆ ಇದೀಗ ಏಕರೂಪದ ತೆರಿಗೆ ವ್ಯವಸ್ಥೆಯಿಂದ ಒಂದೇ ತೆರನಾದ ದರಗಳು ಬಂದಿವೆ. ಇದು ನಮ್ಮ ಉತ್ಪನ್ನಗಳ ಮಾರಾಟಕ್ಕೆ ಉತ್ತೇಜನ ನೀಡಿದೆ. ಅಂತೆಯೇ ನಮ್ಮ ಲಾಭಾಂಶ ಕೂಡ ಶೇ.5ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಇದೇ ವಿಚಾರವಾಗಿ ಮಾತನಾಡಿರುವ ವಾಣಿಜ್ಯ ತೆರಿಗೆ ಆಯುಕ್ತ ಡಿಪಿ ಪ್ರಕಾಶ್ ಅವರು, ಜಿಎಸ್ ಟಿಯಿಂದಾಗಿ ಗ್ರಾಹಕರ ಮೇಲೆ ಹೊರೆ ಬೀಳುತ್ತದೆ ಎಂಬುದು ಸುಳ್ಳು. ಗ್ರಾಹಕರು ಜಿಎಸ್ ಟಿಯನ್ನು ರಾಜ್ಯ ತೆರಿಗೆಯೊಂದಿಗೆ ಹೋಲಿಕೆ ಮಾಡುತ್ತಿದ್ದಾರೆ. ಆದರೆ ಈ ಹಿಂದೆ ರಾಜ್ಯ ತೆರಿಗೆಯೊಂದಿಗೆ ಇತರೆ 16 ವಿವಿಧ ಪ್ರಕಾರದ ತೆರಿಗೆಗಳಿದ್ದವು. ಈಗ ಅವುಗಳೆಲ್ಲವನ್ನೂ ಏಕೀಕರಿಸಲಾಗಿದೆ ಎಂದು ತಿಳಿಸಿದರು.