ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ
ಹುಬ್ಬಳ್ಳಿ: ದುರ್ನಡತೆ ಸರಿಪಡಿಸಿಕೊಳ್ಳಿ, ಇಲ್ಲವೇ ಕ್ರಮ ಎದುರಿಸಿ ಎಂದು ಎಂದು ಧಾರವಾಡದ ಟಾಟಾ ಮೋಟರ್ಸ್ ಕಂಪನಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಶನಿವಾರ ಎಚ್ಚರಿಕೆ ನೀಡಿದ್ದಾರೆ.
ವೆಂಡರ್ ಡೆವಲಪ್'ಮೆಂಟ್ ಮತ್ತು ಇನ್ವೆಸ್ಟ್'ರ್ಸ್ ಸಮ್ಮಿಟ್ 2017 ರೋಡ್ ಶೋ ಉದ್ಘಾಟಿಸಿ ಮಾತನಾಡಿರುವ ಅವರು, ಟಾಟಾ ಮೋಟರ್ಸ್ ಸ್ಥಳೀಯ ಯುವಕರಿಗೆ ಉದ್ಯೋಗ ನೀಡುವುದಕ್ಕೆ ನಿರಾಕರಿಸುತ್ತಿವೆ. ಮೊದಲು ಈ ರೀತಿಯ ಧೋರಣೆಯನ್ನು ಕೈಬಿಡಬೇಕಿದೆ. ಭೂಮಿ ಪಡೆಯುವುದಕ್ಕೂ ಮುನ್ನ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಭರವಸೆ ನೀಡಿದ್ದ ಕಂಪನಿ ಇಂದು ಸಣ್ಣಪುಟ್ಟ ತಪ್ಪು ಮಾಡಿದವರನ್ನು ಕೆಲಸದಿಂದ ತೆಗೆದು ಹಾಕುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರೈತರಿಂದ ನೂರಾರು ಎಕರೆ ಭೂಮಿಯನ್ನು ಪಡೆದುಕೊಂಡಿರುವ ಕಂಪನಿಯವರು ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ. ಕಳೆದ ಐದು ವರ್ಷಗಳಿಂದಲೂ ಸ್ಥಳೀಯರಿಗೆ ಉದ್ಯೋಗಗಳನ್ನು ನೀಡಿಲ್ಲ. ಸ್ಥಳೀಯ ಯುವಕರಿಗೆ ಉದ್ಯೋಗ ದೊರಕಬಹುದು ಎಂದ ಆಶಯದೊಂದಿಗೆ ಪ್ರತಿ ಎಕರೆಗೆ 7-8 ಸಾವಿರ ದಂತೆ ಕಂಪನಿಗೆ ಒಟ್ಟು 2,000 ಎಕರೆ ಭೂಮಿಯನ್ನು ನೀಡಲಾಗಿದೆ. ಕಂಪನಿ ಸ್ಥಳೀಯರನ್ನು ಉದ್ಯೋಗಕ್ಕೆ ತೆಗೆದುಕೊಳ್ಳಲಿಲ್ಲ ಎಂದಾದ ಮೇಲೆ ಭೂಮಿಯನ್ನು ನೀಡಿ ಏನು ಪ್ರಯೋಜನ?...
ಇದು ಕೇವಲ ಟಾಟಾ ಮೋಟರ್ಸ್ ಕಂಪನಿಯೊಂದರ ಸಮಸ್ಯೆಯಲ್ಲ. ಬಹುತೇಕ ಕಂಪನಿಗಳು ಇದೇ ರೂಢಿ ಅನುಸರಿಸಿಕೊಂಡು ಬರುತ್ತಿವೆ. ನೌಕರರನ್ನು ಕಾಯಂ ಮಾಡುತ್ತಿಲ್ಲ. ಕಂಪನಿ ಬೆಳವಮಿಗೆ ಜತೆಗೆ ಸುತ್ತಮುತ್ತಲಿನ ಯುವಕರಿಗೆ ಉದ್ಯೋಗಾವಕಾಶ ನೀಡಬೇಕು. ಸರ್ಕಾರವಾಗಲೀ ಅಥವಾ ನಾನಾಗಲೀ ಕಂಪನಿಗಳ ವಿರುದ್ಧವಿಲ್ಲ. ಆದರೆ, ಸ್ಥಳೀಯ ಯುವಕರ ಕುರಿತಂತೆ ಕಂಪನಿಗಳು ಹೊಂದಿರುವ ಧೋರಣೆಗಳು ಬದಲಾಗಬೇಕು. ಇಲ್ಲದೇ ಹೋದರೆ, ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.