ಬೆಂಗಳೂರು: ಬೆಂಗಳೂರು ಸಾಹಿತ್ಯೋತ್ವದಲ್ಲಿ ಭಾನುವಾರ ರಾಷ್ಟ್ರೀಯತೆ ಕುರಿತಂತೆ ಕಾವೇರಿದ ಚರ್ಚೆ ನಡೆಯಿತು.
ಪ್ರಮುಖವಾಗಿ ಅಂತಿಮ ಚರ್ಚೆಯಾಗಿ ರಾಷ್ಟ್ರೀಯತೆ, ಜನಪ್ರಿಯತೆ ಮತ್ತು ಉದಾರವಾದಿ ವಿಚಾರದ ಕುರಿತು ಚರ್ಚೆ ನಡೆಸಲಾಯಿತು. ಚರ್ಚೆಯಲ್ಲಿ ಜೆಎನ್ ಯು ಪ್ರಾಧ್ಯಾಪಕ ಮಕರಂದ್ ಆರ್ ಪರಂಜಾಪೆ, ಪತ್ರಕರ್ತ ಜಗನ್ನಾಥನ್, ಲೇಖಕ ಮನು ಜೋಸೆಫ್, ಪತ್ರಕರ್ತೆ ಸಾಗರಿಕಾ ಘೋಸ್, ಲೇಖಕ ಸುಕೇತು ಮೆಹ್ತಾ ಮತ್ತು ಹರೀಶ್ ಬಿಜೂರ್ ಅವರು ಪಾಲ್ಗೊಂಡಿದ್ದರು.
ಈ ವೇಳೆ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಜೆಎನ್ ಯು ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರ್ ನನ್ನ ಅಭಿಪ್ರಾಯದಂತೆ ರಾಷ್ಟ್ರೀಯ ಎಂಬುದು ನನ್ನ ಮಾತೃಭಾಷೆ ಬೇರೆಯವರಿಗೂ ಮಾತೃಭಾಷೆಯಾಗಬೇಕೆಂದೇನೂ ಇಲ್ಲ. ಹಿಂದಿ ಹೇರಿಕೆ ತಪ್ಪು ಎಂದು ಹೇಳಿದರು. ಅಂತೆಯೇ ಇತರರ ಸಿದ್ಧಾಂತಗಳನ್ನು ಗೌರವಿಸುವುದು ಮತ್ತು ಸಹಿಷ್ಟುಗಳಾಗುವುದು ಕೂಡ ರಾಷ್ಟ್ರೀಯತೆಯೇ ಎಂದು ಹೇಳಿದರು. ಅಂತೆಯೇ ಇತ್ತೀಚೆಗಿನ ತಾಜ್ ಮಹಲ್ ವಿವಾದವನ್ನು ಉದಾಹರಣೆಯಾಗಿ ನೀಡಿದ ಕನ್ಹಯ್ಯ ಕುಮಾರ್, ತಾಜ್ ಮಹಲ್ ಸ್ಮಾರಕದಲ್ಲಿ ಕಸ ಗುಡಿಸುವ ಬದಲು ಅದೇ ಕೆಲಸವನ್ನು ಆಸ್ಪತ್ರೆಗಳಲ್ಲಿ ಮಾಡಬಹುದಿತ್ತು ಎಂದು ಪರೋಕ್ಷವಾಗಿ ಸಿಎಂ ಯೋಗಿ ಆದಿತ್ಯಾನಾಥ್ ಅವರ ಕಾಲೆಳೆದರು. ಅಂಕೆಯೇ ತಾವು ಯಾರ ಹೆಸರನ್ನೂ ಹೇಳಲು ಇಚ್ಛಿಸುವುದಿಲ್ಲ..ಯಾರಿಗೆ ಗೊತ್ತು ಗೌರಿ ಲಂಕೇಶ್ ಗೆ ಆದಂತೆ ನಾಳೆ ನನಗೂ ಯಾರಾದರೂ ಗುಂಡಿಟ್ಟು ಕೊಲ್ಲಬಹುದು ಎಂದು ಹೇಳಿದರು.
ಇದೇ ವೇಳೆ ಮಲಯಾಳಂ ಲೇಖಕ ಪಾಲ್ ಝಕಾರಿಯಾ ಮಾತನಾಡಿ, ‘ಸಮಾಜದಲ್ಲಿ ನಿರ್ಭೀತ ವಾತಾವರಣ ಸೃಷ್ಟಿಯಾಗಬೇಕು. ಆದರೆ, ಈಗ ಅಂತಹ ವಾತಾವರಣ ಇಲ್ಲ. ಹೀಗಾಗಿ ಗೌರಿಯಂಥವರನ್ನು ನಾವು ಕಳೆದುಕೊಳ್ಳುತ್ತಿದ್ದೇವೆ ಎಂದರು.
ಗೌರಿ ಲಂಕೇಶ್ ಸಾವಿಗೆ ಹೆದರುತ್ತಿರಲ್ಲಿಲ್ಲ
ಇದೇ ವೇಳೆ ಗೌರಿಲಂಕೇಶ್ ಅವರನ್ನು ನೆನೆಯುತ್ತಾ ಭಾವುಕರಾದ ಕನ್ಹಯ್ಯಾ ಕುಮಾರ್, ಗೌರಿ ಲಂಕೇಶ್ ಜನವಿರೋಧಿಗಳ ವಿರುದ್ಧದ ಹೋರಾಟದ ಸಂಕೇತವಾಗಿದ್ದಾರೆ. ಅವರ ಹತ್ಯೆಯನ್ನು ನೆನೆದು ಕಣ್ಣೀರಿಡುತ್ತಾ ಕೂರುವುದರ ಬದಲು ನಾವು ಅವರ ಹೋರಾಟವನ್ನು ಮುಂದುವರಿಸಬೇಕು. ಸಾವಿನ ಭಯ ಹೆಚ್ಚಾದಾಗ ಹೋರಾಟದ ಶಕ್ತಿ ಕುಂದುತ್ತದೆ ಎಂದು ಗೌರಿ ಲಂಕೇಶ್ ಹೇಳುತ್ತಿದ್ದರು. ಅವರು ಸಾವಿಗೆ ಅಂಜಿದವರಲ್ಲ. ಮಾರ್ಕ್ಸ್‌ವಾದ ಮತ್ತು ಅಂಬೇಡ್ಕರ್ ವಾದ ಎರಡನ್ನೂ ಅವರು ವಿಮರ್ಶೆಯ ದೃಷ್ಟಿಯಿಂದ ನೋಡುತ್ತಿದ್ದರು. ನಾನು ಜೈಲಿಗೆ ಹೋಗಿ ಬಂದ ಸಂದರ್ಭದಲ್ಲಿ ನನ್ನ ಗೆಳೆಯರೂ ನನ್ನನ್ನು ದೂರ ಇಟ್ಟಿದ್ದರು. ಆದರೆ, ಗೌರಿ ಲಂಕೇಶ್ ಅಮ್ಮನಾಗಿ ನನ್ನ ಬೆನ್ನಿಗೆ ನಿಂತರು. ಅವರು ನನ್ನನ್ನು ಸ್ವೀಟಿ ಎಂದು ಕರೆಯುತ್ತಿದ್ದರು. ಅವರ ಸಾವನ್ನು ನೆನಪಿಸಿಕೊಂಡಾಗ ತುಂಬಾ ದುಃಖವಾಗುತ್ತದೆ. ಆದರೆ, ನಾನು ಕಣ್ಣೀರಿಡುವುದಿಲ್ಲ. ನಮ್ಮ ಮುಂದಿನ ಹೋರಾಟದ ಶಕ್ತಿ ಗೌರಿ. ಅವರು ಇನ್ನಿಲ್ಲ ಎಂದುಕೊಂಡು ನಾವು ಕಣ್ಣೀರಿಡಬಾರದು’ ಎಂದರು.