ಬೆಂಗಳೂರು: ವಿದ್ಯುತ್ ಖರೀದಿ ಹಗರಣ ತನಿಖೆ ಸದನ ಸಮಿತಿಯ ಅಂತಿಮ ಸಭೆಗೆ ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರು ಗೈರು ಹಾಜರಾದ ಕಾರಣ ನವೆಂಬರ್ 7ಕ್ಕೆ ಸಭೆಯನ್ನು ಮುಂದೂಡಲಾಗಿದೆ.
ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯ ಸಮಿತಿ ಸೋಮವಾರ ಕರೆದಿದ್ದ ಅಂತಿಮ ಸಭೆ ತೀವ್ರ ರಾಜಕೀಯ ಕುತೂಹಲಕ್ಕೆ ಕಾರಣವಾಗಿತ್ತು. ಸಚಿವರೇ ಖುದ್ದು ಭೇಟಿ ನೀಡಿ ಆಮಂತ್ರಿಸಿದ್ದರೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅನಾರೋಗ್ಯ ಕಾರಣ ನೀಡಿ ಹಾಜರಾಗಿರಲಿಲ್ಲ,
ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್,''ವರದಿ ಸಲ್ಲಿಸುವುದಕ್ಕೆ ಎಲ್ಲ ಸದಸ್ಯರು ಸಹಿ ಹಾಕಬೇಕು ಎಂದೇನಿಲ್ಲ. ಮೂವರು ಸದಸ್ಯರು ಒಪ್ಪಿಗೆ ನೀಡಿದರೆ ಸಾಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇರುವುದರಿಂದ ನ 7ರ ವರೆಗೂ ಸಹಿಗಾಗಿ ಅವಕಾಶ ನೀಡುತ್ತೇವೆ ಎಂದರು.
ಶಿವಕುಮಾರ್ ಸೇರಿ ಕಾಂಗ್ರೆಸ್ ಶಾಸಕರಾದ ಶಿವಾನಂದ ಪಾಟೀಲ್, ನರೇಂದ್ರಸ್ವಾಮಿ ಮಾತ್ರ ಹಾಜರಿದ್ದರು. ಎಲ್ಲ ಸದಸ್ಯರ ಸಹಿ ಇಲ್ಲದೇ ಇದ್ದುದರಿಂದ ವರದಿ ಅಂತಿಮಗೊಂಡಿಲ್ಲ. ಆದರೆ ಸದಸ್ಯರ ಸಹಿ ಸಂಗ್ರಹಕ್ಕೆ ನ.7ರ ವರೆಗೆ ಕಾಲಾವಕಾಶ ನೀಡಲಾಗಿದ್ದು, ನ 13ರಂದು ಬೆಳಗಾವಿಯಲ್ಲಿ ಆರಂಭಗೊಳ್ಳುವ ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ವರದಿ ಮಂಡಿಸಲಾಗುತ್ತದೆ ಎಂದು ತಿಳಿಸಿದರು.
ಅನಾರೋಗ್ಯ ಹಿನ್ನೆಲೆಯಲ್ಲಿ ಇಂದಿನ ಸಭೆಗೆ ಕುಮಾರಸ್ವಾಮಿ ಬಂದಿಲ್ಲ. ಬಸವರಾಜ್ ಬೊಮ್ಮಾಯಿ ದೆಹಲಿಯಲ್ಲಿದ್ದಾರೆ. ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡ ಹಾಜರಾಗಲು ಸಾಧ್ಯವಿಲ್ಲ ಎಂದು ಪತ್ರ ಬರೆದಿದ್ದಾರೆ. ನಾವು ಮೂವರೇ ಕುಳಿತುಕೊಂಡು ವರದಿ ಸಿದ್ದಪಡಿಸಿದ್ದೇವೆಂಬ ಆರೋಪ ಬರಬಾರದೆಂಬ ಕಾರಣಕ್ಕೆ ಸಮಯ ವಿಸ್ತರಿಸಿದ್ದೇವೆ ಎಂದು ಶಿವಕುಮಾರ್ ಸ್ಪಷ್ಟ ಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics