ಮೈಸೂರು: ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಜೆಡಿಎಸ್ ಶಾಸಕ ಚಿಕ್ಕಮಾದು ಅವರು (68 ವರ್ಷ) ಮಂಗಳವಾರ ತಡರಾತ್ರಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ ಎಂದು ತಿಳಿದುಬಂದಿದೆ,
ಮಾಧ್ಯಮವೊಂದು ವರದಿ ಮಾಡಿರುವಂತೆ ಯಕೃತ್ ಕಸಿ ಮಾಡಿಸಿಕೊಂಡಿದ್ದ ಚಿಕ್ಕಮಾದು ಅವರಿಗೆ ಸೋಂಕು ಕಾಣಿಸಿಕೊಂಡಿತ್ತು, ಇದರಿಂದ ಮೂತ್ರಪಿಂಡದಲ್ಲೂ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ಮೈಸೂರು ನಗರದ ಸಿಗ್ಮಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಬಳಿಕ ಸ್ವಲ್ಪ ಚೇತರಿಸಿಕೊಂಡಿದ್ದ ಅವರು ಆ್ಯಂಬುಲೆನ್ಸ್ನಲ್ಲೇ ವಿಧಾನಸೌಧ ವಜ್ರಮಹೋತ್ಸವ ಸಮಾರಂಭಕ್ಕೆ ಹೋಗಿ ಬಂದಿದ್ದರು. ಬಳಿಕ ಅವರ ಆರೋಗ್ಯ ಸ್ಥಿತಿ ಉಲ್ಬಣಿಸಿದ್ದರಿಂದ ನಗರದ ಅರವಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಮೂರು ದಿನಗಳಿಂದ ವೆಂಟಿಲೇಟರ್ ಮೂಲಕ ಕೃತಕ ಉಸಿರಾಟ ವ್ಯವಸ್ಥೆ ಅಳವಡಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ತಡರಾತ್ರಿ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಮೈಸೂರು ಜಿಲ್ಲೆಯ ಕೆ.ಆರ್ ತಾಲೂಕಿನ ಹೊಸೂರು ಕಲ್ಲಹಳ್ಳಿಯಲ್ಲಿ ಜನಿಸಿದ ಚಿಕ್ಕಮಾದು ಅವರು 1978ರಲ್ಲಿ ರಾಜಕೀಯಕ್ಕೆ ಪ್ರವೇಶ ಮಾಡಿದರು. 1991ರಲ್ಲಿ ಮೊದಲ ಬಾರಿ ಹುಣಸೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಅವರು, 2007-08ರಲ್ಲಿ ಜೆಡಿಎಸ್ನಿಂದ ಎಂಎಲ್ಸಿಯಾಗಿ ಆಯ್ಕೆಯಾದರು. ಬಳಿಕ 2013ರಲ್ಲಿ ಎಚ್.ಡಿ.ಕೋಟೆ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.
ಚಿಕ್ಕಮಾದು ಅವರು ಹಿರಿಯ ಪತ್ನಿ ಜಯಮ್ಮ ಕಿರಿಯ ಪತ್ನಿ ನಾಗಮ್ಮ ಹಾಗೂ ನಾಲ್ವರು ಮಕ್ಕಳನ್ನು ಅಗಲಿದ್ದಾರೆ. ಅವರ ಕುಟುಂಬ ಮೂಲಗಳು ತಿಳಿಸಿರುವಂತೆ ಹುಣಸೂರು ತಾಲೂಕಿನ ಹೊಸರಾಮೇನಹಳ್ಳಿಯಲ್ಲಿ ಇಂದು ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಇನ್ನು ಚಿಕ್ಕಮಾದು ಅವರ ನಿಧನಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು, "ಚಿಕ್ಕಮಾದು ಅವರ ಅಕಾಲಿಕ ನಿಧನ ದುಖಃ ತಂದಿದೆ. ನಾಡು ಜನಪರ ಕಾಳಜಿಯುಳ್ಳ ಜನಪ್ರತಿನಿಧಿಯನ್ನು ಕಳೆದುಕೊಂಡಿದೆ. ಜೆಡಿಎಸ್ ಪಕ್ಷ ನಿಷ್ಠಾವಂತ ನಾಯಕನನ್ನು ಕಳೆದುಕೊಂಡಿದೆ. ಅವರ ಅಗಲಿಕೆಯ ದುಖಃ ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತ ಕರುಣಿಸಲಿ ಎಂದು ಸಂತಾಪ ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics