ಬೆಂಗಳೂರು: ಆಪ್ ಆಧಾರಿತ ಸಾರಿಗೆ ಸಂಸ್ಥೆ ಉಬರ್ ಬೆಂಗಳೂರು ನಗರದಲ್ಲಿ ವಿಶಿಷ್ಟ ಚೇತನರು ಹಾಗೂ ಹಿರಿಯ ನಾಅರಿಕರಿಗಾಗಿಯೇ ವಿಶೇಷ ಕ್ಯಾಬ್ ಸಂಚಾರವನ್ನು ಪ್ರಾರಂಭಿಸಿದೆ. 'ಉಬರ್ ಅಕ್ಸೆಸ್ ಮತ್ತು ಉಬರ್ ಅಸಿಸ್ಟ್' ಎಂದು ಕರೆಯಲ್ಪಡುವ ಈ ಕ್ಯಾಬ್ ಗಳು ಗಾಲಿಕುರ್ಚಿಗಳನ್ನು ಬಳ್ಸುವವರಿಗೆ ಅನುಕೂಲವಾಗುವಂತೆ ರ್ಯಾಂಪ್ ಮತ್ತು ಹೆಚ್ಚುವರಿ ಸ್ಥಳಾವಕಾಶವನ್ನು ಹೊಂದಿದೆ.
ಐಟಿ ಸೇವಾ ಸಂಸ್ಥೆ ಎಂಫಸಿಸ್ ಸಹಯೋಗದೊಡನೆ ಉಬರ್ ಈ ನೂತನ ಸಾರಿಗೆ ಸೌಲಭ್ಯವನ್ನು ನಿನ್ನೆ ಬೆಂಗಳೂರಿನಲ್ಲಿ ಉದ್ಘಾಟನೆ ಮಾಡಿತು. ಉಬರ್ ಈ ಸೇವೆಯನ್ನು ಸದ್ಯಕ್ಕೆ ಬೆಂಗಳೂರಿನಲ್ಲಿ ಮಾತ್ರವೇ ಪರಿಚಯಿಸಿದ್ದು ಶೀಘ್ರದಲ್ಲೇ ಇತರ ನಗರಗಳಿಗೂ ವಿಸ್ತರಿಸಲಿದೆ.
ಉಬರ್ ಆಕ್ಸಸ್ ಏಷ್ಯಾದಲ್ಲಿಯೇ ಮೊದಲ ಪ್ರಯೋಗವಾಗಿದೆ. ಗಾಲಿಕುರ್ಚಿಯೊಂದಿಗೆ ಪ್ರವೇಶಿಸಬಹುದಾದಷ್ಟು ಸ್ಥಳಾವಕಾಶವನ್ನು ಇದು ಹೊಂದಿದೆ. ಸಂಸ್ಥೆ ಹೇಳಿಕೆಯಂತೆ ಪ್ರಾರಂಭದಲ್ಲಿ 50 ವಾಹನಗಳು ನಗರದಾದ್ಯಂತ ಸೇವೆ ಒದಗಿಸಲಿವೆ. ವಿಭಿನ್ನವಾಗಿ-ಬಾಗಿರುವ ಸೀಟನ್ನೊಳಗೊಂದ ಇದು ಇತರ ವಾಹನಗಳಿಗಿಂತ ಬೇರಾಗಿರಲಿದೆ. ಇದೇ ವೇಳೆ ಸ್ವಯಂಚಾಲಿತ ರ್ಯಾಂಪ್ ಗಳು ಪ್ರಯಾಣಿಕರನ್ನು ವಾಹನಕ್ಕೆ ಪ್ರವೇಶಿಸಲು ಸಹಕಾರ ನೀಡುತ್ತವೆ.
ಉಬರ್ ಅಸಿಸ್ಟ್ ನಲ್ಲಿ, ಗಾಲಿಕುರ್ಚಿಗಳನ್ನು ಹೊಂದಿಸಲು ಸಾಕಷ್ಟು ಸ್ಥಳಾವಕಾಶ ಇರುತ್ತದೆ. ಚಾಲಕರು ಪ್ರಯಾಣಿಕರಿಗೆ ಕ್ಯಾಬ್ ಹತ್ತಲು ಮತ್ತು ಇಳಿಯಲು ಸಹಾಯ ಮಾಡುತ್ತಾರೆ. ಸಂಸ್ಥೆಯು ನಗರದಾದ್ಯಂತ 500 ವಿಶೇಷ ಕ್ಯಾಬ್ ಗಳನ್ನು ಪರಿಚಯಿಸುತ್ತಿದೆ.