ಕರ್ನಾಟಕದಲ್ಲಿ ನಡೆದ ಅಪಘಾತ ಪ್ರಕರಣಗಳ ಅಂಕಿ ಅಂಶ
ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಅಪಘಾತಗಳಿಂದಾಗಿ ಪ್ರತಿ 10 ನಿಮಿಷಕ್ಕೆ ಒಬ್ಬ ಗಾಯಗೊಂಡು, ಪ್ರತಿಗಂಟೆಗೆ ಒಬ್ಬ ಸಾವನ್ನಪ್ಪುತ್ತಿದ್ದಾನೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.ರಾಷ್ಟ್ರ ಮಟ್ಟದಲ್ಲಿ ಪ್ರತಿ ಗಂಟೆಗೆ 55 ಅಪಘಾತಗಳು ಸಂಭವಿಸುತ್ತಿದ್ದು, 17 ಮಂದಿ ಸಾವನ್ನಪ್ಪುತ್ತಿದ್ದಾರೆ.
ಕೇಂದ್ರ ರಸ್ತೆ ಸಾರಿಗೆ ಹೆದ್ದಾರಿ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶಗಳಿಂದ ಈ ಮಾಹಿತಿ ತಿಳಿದು ಬಂದಿದೆ.
2016 ರಲ್ಲಿ ಅತಿ ಹೆಚ್ಚು ರಸ್ತೆ ಅಪಘಾತ ಪ್ರಕರಣಗಳು ವರದಿಯಾಗ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ.
ಭಾರತದಲ್ಲಿ ರಸ್ತೆ ಅಪಘಾತ–2016ರ ವರದಿ ಪ್ರಕಾರ, ತಮಿಳುನಾಡಿನ ರಸ್ತೆಗಳಲ್ಲಿ ಅತ್ಯಂತ ಹೆಚ್ಚು ಅಂದರೆ 71,431 (ಶೇ 14.9) ಅಪಘಾತಗಳು ನಡೆದಿವೆ. 53,972 (ಶೇ 11.2) ಪ್ರಕರಣಗಳು ದಾಖಲಾಗಿರುವ ಮಧ್ಯಪ್ರದೇಶ ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ 44,403 ಪ್ರಕರಣಗಳು ನಡೆದು ಮೂರನೇ ಸ್ಥಾನದಲ್ಲಿದೆ.
ಕುತೂಹಲಕಾರಿ ಸಂಗತಿ ಎಂದರೆ, ಮಹಾರಾಷ್ಟ್ರದಲ್ಲಿ ಅಪಘಾತಗಳ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ. 2015ರಲ್ಲಿ ಅಲ್ಲಿನ ರಸ್ತೆಗಳಲ್ಲಿ 63,805 ಅಪಘಾತಗಳು ವರದಿಯಾಗಿದ್ದರೆ, 2016ರಲ್ಲಿ ಇದು 39,878ಕ್ಕೆ ಇಳಿದಿದೆ. ನಗರಗಳ ಪೈಕಿ ಚೆನ್ನೈನಲ್ಲಿ ಅತಿ ಹೆಚ್ಚು ಅಂದರೆ 7,846 ಮತ್ತು ದೆಹಲಿಯಲ್ಲಿ 7,375 ರಸ್ತೆ ಅವಘಡಗಳು ವರದಿಯಾಗಿವೆ.
ದ್ವಿಚಕ್ರ ವಾಹನ ಚಲಾಯಿಸುವಾಗ ಹೆಲ್ಮೆಟ್ ಬಳಸದಿರುವುದು ಹಾಗೂ ಕಾರು ಚಲಾಯಿಸುವಾಗ ಸೀಟ್ ಬೆಲ್ಟ್ ಧರಿಸದ ಪರಿಣಾಮ ಅಪಘಾತಗಳು ನಡೆದ ವೇಳೆಯಲ್ಲಿ ಹೆಚ್ಚಿನ ಜನರು ಸಾವನ್ನಪ್ಪುತ್ತಿದ್ದಾರೆ ಎಂದು ತಿಳಿದು ಬಂದಿದೆ.