ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ
ಬೆಂಗಳೂರು: ‘ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ಮಾಸಿಕ 6000 ರೂ.ಕನಿಷ್ಠ ವೇತನ ನಿಗದಿಪಡಿಸಬೇಕು, ಆಶಾ ಸಾಫ್ಟ್ ವೇರ್ ರದ್ದುಪಡಿಸಬೇಕೆಂದು’ ಎಂದು ಒತ್ತಾಯಿಸಿ ‘ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ’ ನೇತೃತ್ವದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಫ್ರೀಡಂ ಪಾರ್ಕ್ ನಲ್ಲಿ ಸೇರಿದ ಪ್ರತಿಭಟನಾಕಾರರು ಅಹೋರಾತ್ರಿ ಪ್ರತಿಭಟಿಸಿನೆ ನಡೆಸಿದ್ದಾರೆ.
ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಮತ್ತು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸ್ವಾತಂತ್ರ್ಯ ಉದ್ಯಾನದಲ್ಲಿ ಜಮಾವಣೆಗೊಂಡ ಕಾರ್ಯಕರ್ತೆಯರು, ರಾಜ್ಯ ಸರ್ಕಾರ 6000 ರೂ. ಗೌರವಧನ ನೀಡಬೇಕು. ಅಲ್ಲಿಯವರೆಗೂ ಮುಷ್ಕರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಪ್ರತಿಭಟನ ತೀವ್ರ ಸ್ವರೂಪ ಪಡೆದಾಗ ಸರ್ಕಾರದ ಪರವಾಗಿ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಸ್ಥಳಕ್ಕೆ ಭೇಟಿ ನೀಡಿ, "ಆಶಾ ಕಾರ್ಯಕರ್ತೆಯರಿಗೆ ವಿವಿಧ ಪ್ರಕಾರದ 32 ಚಟುವಟಿಕೆ ನೀಡಲಾಗಿದೆ. ಅವುಗಳಿಗೆ ಅನುಗುಣವಾಗಿ ಪ್ರೋತ್ಸಾಹಧನ ನಿಗದಿಪಡಿಸಲಾಗಿದೆ. ಆದರೆ, ಈಗ ಒಟ್ಟಾರೆ 5000 ರೂ. ಪ್ರೋತ್ಸಾಹಧನ ನೀಡಲಾಗುವುದು. ಪ್ರತಿ ತಾಲೂಕಿಗೆ ಒಬ್ಬ ಆಶಾ ಸಾಫ್ಟ್ ವೇರ್ ನ ಡೇಟಾ ಎಂಟ್ರಿ ಆಪರೇಟರ್ ಅನ್ನು ನಿಯೋಜಿಸಲಾಗುವುದು' ಎಂದು ಹೇಳಿದರು. ಇದಾದ ತಕ್ಷಣವೇ ಸರ್ಕಾರ ಗೌರವಧನ ಹೆಚ್ಚಿಸಿ ಆದೇಶವನ್ನೂ ಹೊರಡಿಸಿತು.
ಆದರೆ ಸರ್ಕಾರದ ಈ ನಿರ್ಧಾರಕ್ಕೂ ಮನ್ನಣೆ ಕೊಡದ ಆಶಾ ಕಾರ್ಯಕರ್ತೆಯರು "ಜನಪ್ರತಿನಿಧಿಗಳ ಭತ್ಯೆ-ಗೌರವಧನ ಹೆಚ್ಚಿಸಲು ಸರ್ಕಾರಕ್ಕೆ ಹಣಕಾಸಿನ ಕೊರತೆ ಇಲ್ಲ. ಆದರೆ ಬೀದಿ-ಬೀದಿ ಅಲೆದು ಜನರಿಗೆ ಆರೋಗ್ಯ ಸೇವೆ ನೀಡುವ ನಮಗೆ 6000 ರೂ. ಗೌರವಧನ ನೀಡಲು ಚೌಕಾಸಿ ಮಾಡುತ್ತಿದೆ. ತೆಲಂಗಾಣ, ಕೇರಳದಲ್ಲಿ 6 ರಿಂದ 7 ಸಾವಿರ ರೂ. ಗೌರವಧನ ನೀಡಲಾಗುತ್ತಿದೆ. ಅದೇ ಮಾದರಿಯಲ್ಲಿ ತಮಗೂ ನೀಡಬೇಕು' ಎಂದು ಆಗ್ರಹಿಸಿದರು.
ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ಕೆ.ಸೋಮಶೇಖರ್ ಯಾದಗಿರಿ "ಆಶಾ ಕಾರ್ಯಕರ್ತೆಯರಿಗೆ ನೀಡುವ ಅನುದಾನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲಿದೆ. ನಾವು ಮಾಡುವ ಕೆಲಸಗಳಿಗೆ ಅನುಗುಣವಾಗಿ ಕೇಂದ್ರ ಅನುದಾನ ನೀಡಿದರೆ, ಅಷ್ಟೇ ಪ್ರಮಾಣದ ಅನುದಾನವನ್ನು ರಾಜ್ಯ ಸರ್ಕಾರ ಮ್ಯಾಚಿಂಗ್ ಗ್ರ್ಯಾಂಟ್ ರೂಪದಲ್ಲಿ ನೀಡಬೇಕು. ಆದರೆ, ರಾಜ್ಯ ಸರ್ಕಾರ ಎಲ್ಲವೂ ಸೇರಿ 5 ಸಾವಿರ ರೂ. ನೀಡುವುದಾಗಿ ಹೇಳುತ್ತಿದೆ. ಹಾಗಾಗಿ, ಇದು ಸಮ್ಮತವಲ್ಲ" ಎಂದರು.
ಮುಷ್ಕರದಲ್ಲಿ ಲೇಖಕಿ ರೂಪಾ ಹಾಸನ್, ವಕೀಲರಾದ ಹೇಮಲತಾ ಮಹಿಷಿ, ಎಐಯುಟಿಯುಸಿ ಉಪಾಧ್ಯಕ್ಷ ಕೆ. ರಾಧಾಕೃಷ್ಣ, ಆರೋಗ್ಯ ಇಲಾಖೆ ನಿರ್ದೇಶಕ ನಟರಾಜ್ ಮತ್ತಿತರರು ಭಾಗವಹಿಸಿದ್ದರು.
ಫ್ರೀದಂ ಪಾರ್ಕ್ ನಲ್ಲೇ ರಾತ್ರಿ ಕಳೆದರು: ಪ್ರತಿಭಟನಾನಿರತ ಆಶಾ ಕಾರ್ಯಕರ್ತರು, ಸ್ವಾತಂತ್ರ್ಯ ಉದ್ಯಾನ ಹಾಗೂ ಅಕ್ಕ–ಪಕ್ಕದ ರಸ್ತೆ ಹಾಗೂ ಫುಟ್‌ಪಾತ್‌ನಲ್ಲೇ ಮಲಗಿ ಗುರುವಾರ ರಾತ್ರಿ ಕಳೆದಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಿಂದ ನಗರಕ್ಕೆ ಬಂದಿರುವ ಸಾವಿರಾರು ಕಾರ್ಯಕರ್ತೆಯರಿಗೆ ರಾತ್ರಿ ಕಳೆಯಲು ಸೂಕ್ತ ವ್ಯವಸ್ಥೆಯೂ ಸಿಗಲಿಲ್ಲ. ನೆಲದ ಮೇಲೇ ಮಲಗಬೇಕಾಗಿತ್ತು. ಲವರು ತಮ್ಮೊಂದಿಗೆ ಕರೆತಂದಿದ್ದ ಮಕ್ಕಳನ್ನೂ ರಸ್ತೆಯಲ್ಲೇ ಮಲಗಿಸಿದ್ದು ಕಂಡುಬಂತು.
ರಾತ್ರಿ ಮಳೆ ಸುರಿದ ವೇಳೆಯಲ್ಲೂ ಕಾರ್ಯಕರ್ತೆಯರು ರಸ್ತೆ ಬಿಟ್ಟು ಏಳಲಿಲ್ಲ. ಮಳೆಯಲ್ಲೇ ನೆನೆದು ಪ್ರತಿಭಟನೆ ಮುಂದುವರಿಸಿದರು.
ಪ್ರತಿಭಟನಾ ಸ್ಥಳಕ್ಕೆ ರಾತ್ರಿ ಭೇಟಿ ನೀಡಿದ್ದ ಆರೋಗ್ಯ ಸಚಿವ ರಮೇಶ್‌ಕುಮಾರ್, ಕಾರ್ಯಕರ್ತೆಯರೊಂದಿಗೆ ಮಾತುಕತೆ ನಡೆಸಿದರು.ಆದರೆ ಅದೂ ಸಹ ಪಲಪ್ರದವಾಗದೆ ಪ್ರತಿಭಟನೆ ಇಂದೂ ಮುಂದುವರಿದಿದೆ.