ವೀರಶೈವ-ಲಿಂಗಾಯತ ಒಂದೇ: ಈಶ್ವರ ಖಂಡ್ರೆ
ವೀರಶೈವ, ಲಿಂಗಾಯತರು ಬೇರೆ ಅಲ್ಲ. ಸ್ವತಂತ್ರ ಧರ್ಮಕ್ಕೆ ಎಷ್ಟೇ ಹೋರಾಟ ಮಾಡಿದರೂ ಅದು ತಾತ್ಕಾಲಿಕ. ಯಾವುದೇ ಕಾರಣಕ್ಕೂ ಲಿಂಗಾಯತ...
ಬೆಂಗಳೂರು: ವೀರಶೈವ, ಲಿಂಗಾಯತರು ಬೇರೆ ಅಲ್ಲ. ಸ್ವತಂತ್ರ ಧರ್ಮಕ್ಕೆ ಎಷ್ಟೇ ಹೋರಾಟ ಮಾಡಿದರೂ ಅದು ತಾತ್ಕಾಲಿಕ. ಯಾವುದೇ ಕಾರಣಕ್ಕೂ ಲಿಂಗಾಯತ–ವೀರಶೈವ ವಿಘಟನೆ ಆಗಲು ಬಿಡುವುದಿಲ್ಲ ಎಂದು ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ವೀರಶೈವ–ಲಿಂಗಾಯತ ನಾವೆಲ್ಲಾ ಒಂದೇ’ ಎಂಬ ಘೋಷ ವಾಕ್ಯದಡಿ ಅಖಿಲ ಭಾರತ ವೀರಶೈವ ಮಹಾಸಭಾದ ಬೆಂಗಳೂರು ನಗರದಲ್ಲಿ ಹಮ್ಮಿಕೊಂಡಿದ್ದ ಯುವ ಬಾಂಧವ್ಯ ಸಮಾವೇಶದಲ್ಲಿ ಮಾತನಾಡಿದ ಅವರು, ಹೋರಾಟಗಾರರಿಗೆ ಬಸವತತ್ವ ಎಂಬುದು ಬರಿ ಬಾಯಿ ಮಾತಾಗಿದೆ. ಇವರೆಲ್ಲಾ ನುಡಿದಂತೆ ನಡೆಯುವ ಜನರಲ್ಲ. ಸೌಲಭ್ಯದ ಹೆಸರಿನಲ್ಲಿ ಒಳ ಪಂಗಡಗಳ ದಾರಿ ತಪ್ಪಿಸುತ್ತಿದ್ದಾರೆ. ತಾವು ಹೇಳಿದ್ದೇ ನಡೆಯುತ್ತದೆ ಎಂದು ಭಾವಿಸಿದ್ದಾರೆ. ಇವರ ಬಗ್ಗೆ ಸಮಾಜದ ಯುವಕರು ಗಂಭೀರವಾಗಿ ಆಲೋಚಿಸಬೇಕು ಎಂದು ಕರೆ ನೀಡಿದರು.
ವೀರಶೈವ ಮಹಸಭಾ 113 ವರ್ಷಗಳ ಹಿಂದೆಯೇ ಸ್ಥಾಪಿಸಲ್ಪಟ್ಟಿದೆ. ಸಮಾಜ ಬೆಳೆದು ಅಭಿವೃದ್ದಿಯಾಗಿ, ಲಾಭ ಪಡೆಯಲಿ ಎಂಬುದಷ್ಟೇ ಇದರ ಉದ್ದಶವಾಗಿತ್ತು. ಅನೇಕ ಶಿಕ್ಷಣ ಸಂಸ್ಥೆಗಳು ಬಂದವು. ಬೆಂಗಳೂರಿ ಐಟಿ ಹಬ್ ಮತ್ತು ಶೈಕ್ಷಣಿಕ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದೆ. ನಾವಿಬ್ಬರು ಅಂದರೆ ವೀರಶೈವ ಮತ್ತು ಲಿಂಗಾಯತ ಒಟ್ಟಿಗೆ ಇದ್ದರೇ ಒಳಿತಾಗಲು ಸಾಧ್ಯ, ಇದು ಸಮಾಜಕ್ಕೆ ಉತ್ತಮ ಕೊಡುಗೆ ಎಂದು ಹೇಳಿದ್ದಾರೆ.
ವೀರಶೈವ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಎನ್.ತಿಪ್ಪಣ್ಣ ಮಾತನಾಡಿ, ‘ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಮುಂದಿಟ್ಟುಕೊಂಡು ಹೋದರೆ ಕೇಂದ್ರ ಬಿಜೆಪಿ ಸರ್ಕಾರ ಯಾವುದೇ ಕಾರಣಕ್ಕೂ ಅದನ್ನು ಮಾನ್ಯ ಮಾಡುವುದಿಲ್ಲ. ಸಾರಾಸಗಟಾಗಿ ಈ ಮನವಿ ತಳ್ಳಿ ಹಾಕುತ್ತಾರೆ’ ಎಂದರು.
‘ಈ ಹಿಂದೆ ನಾನು, ಭೀಮಣ್ಣ ಖಂಡ್ರೆ, ವಿಶ್ವನಾಥ ರೆಡ್ಡಿ ಮುದ್ನಾಳ ಅಂದಿನ ಗೃಹ ಮಂತ್ರಿ ಎಲ್.ಕೆ.ಅಡ್ವಾಣಿ ಅವರನ್ನು ಭೇಟಿಯಾಗಿ ವೀರಶೈವ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಅಲ್ಪಸಂಖ್ಯಾತರ ಮಾನ್ಯತೆ ಕೋರಿದ್ದೆವು. ಆಗ ಅಡ್ವಾಣಿ ಅತ್ಯಂತ ಕೋಪದಿಂದ ಅದನ್ನು ತಿರಸ್ಕರಿಸಿದ್ದರು ಎಂದು ಸ್ಮರಿಸಿದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.