ರಾಜ್ಯ

ಎಂಬಿ ಪಾಟೀಲ್ ಸಿದ್ದಗಂಗಾ ಶ್ರೀಗಳ ಹೇಳಿಕೆ ತಿರುಚಿಲ್ಲ: ಶ್ರೀಗಳ ಹೇಳಿಕೆ ಹಿಂದೆ ಸಂಘ ಪರಿವಾರದ ಕೈವಾಡ

Shilpa D
ಬೆಂಗಳೂರು: ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ವಿಷಯದಲ್ಲಿ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಹೇಳಿಕೆಯನ್ನು ಜಲ ಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ತಿರುಚಿಲ್ಲ ಎಂದು ಸಚಿವರ ಬೆಂಬಲಕ್ಕೆ ಬಂದಿರುವ ಲಿಂಗಾಯತ ಮುಖಂಡರು ಸಮರ್ಥಿಸಿಕೊಂಡಿದ್ದಾರೆ.
ಸಚಿವ ವಿನಯ್ ಕುಲಕರ್ಣಿ, ಜೆಎಡಿಎಸ್ ಎಂಎಲ್ಸಿ ಬಸವರಾಜ ಹೊರಟ್ಟಿ, ಆಳಂದ ಶಾಸಕ ಬಿ.ಆರ್ ಪಾಟೀಲ್ ಮತ್ತು ನಿವೃತ್ತ ಐಎಎಸಿ ಅಧಿಕಾರಿ ಕೆ,ಎಸ್ ಜಾಮದಾರ್ ಗುರುವಾರ ಸುದ್ದಿಗೋಷ್ಠಿ ನಡೆಸಿ ಪಾಟೀಲ್ ಬೆಂಬಲಕ್ಕೆ ನಿಂತಿದ್ದಾರೆ. ಸಚಿವರು ಸ್ವಾಮೀಜಿಗಳ ಹೇಳಿಕೆಯನ್ನು ತಿರುಚಿಲ್ಲ, ಸಿದ್ದಗಂಗಾ ಶ್ರೀಗಳ ಜೊತೆ ಚರ್ಚಿಸಿದ ನಂತರ ಅವರ ಅಭಿಪ್ರಾಯವನ್ನು ಪಾಟೀಲ್ ತಿಳಿಸಿದ್ದಾರೆ ಎಂದು ವಿವರಿಸಿದ್ದಾರೆ.
ಈ ಪ್ರಕರಣದಲ್ಲಿ ಶ್ರೀಗಳನ್ನು ಎಳೆಯಬಾರದು ಎಂದು ಬಸವರಾಜ ಹೊರಟ್ಟಿ ಹೇಳಿದರು. ಜೊತೆಗೆ ಪಾಟೀಲರು ಸುಳ್ಳು ಹೇಳತ್ತಿಲ್ಲ ಎಂದು ಹೇಳಿದರು, ಅಂದರೆ ಶ್ರೀಗಳು ಸುಳ್ಳು ಹೇಳುತ್ತಿದ್ದಾರೆಯೆ ಎಂದು ಕೇಳಿದ ಪ್ರಶ್ನೆಗೆ ಯಾರೋಬ್ಬರು ಉತ್ತರಿಸಲಿಲ್ಲ.
ಪಾಟೀಲರ ಹೇಳಿಕೆಯಲ್ಲಿ ನೂರಕ್ಕೆ ನೂರರಷ್ಟು ಸತ್ಯವಿದೆ. ಇದು ಸಂಘ ಪರಿವಾರದವರಿಗೆ ಗಾಬರಿ ಹುಟ್ಟಿಸಿದೆ. ಆದ್ದರಿಂದಲೇ ರಾತ್ರೋರಾತ್ರಿ ಶ್ರೀಗಳ ಸಂದೇಶವನ್ನು ಬದಲಿಸಿ ಎಂದು ದೆಹಲಿಯಿಂದ ಸೂಚನೆ ಬಂದಿದೆ’ ಹೀಗಾಗಿ ಶ್ರೀಗಳು ತಮ್ಮ ನಿಲುವನ್ನು ಬದಲಿಸಿದ್ದಾರೆ ಎಂದು ಶಾಸಕ ಬಿ.ಆರ್‌. ಪಾಟೀಲ ಆರೋಪಿಸಿದ್ದಾರೆ.
ನಮ್ಮ ಹೋರಾಟವನ್ನು ಹತ್ತಿಕ್ಕಲು ಯತ್ನ ನಡೆಯುತ್ತಿದೆ. ಸೋಮಣ್ಣ ಮತ್ತು ಯಡಿಯೂರಪ್ಪ ಅವರು ಮಠಕ್ಕೆ ಭೇಟಿ ನೀಡಿದ ವೇಳೆ, ಮುಂದೆ ಏನಾಗುತ್ತದೆ ಎಂಬುದಕ್ಕೆ ಎರಡು ದಿನ ಕಾದು ನೋಡಿ ಎಂದು ಹೇಳಿದ್ದರು. ಆದರೆ ಯಾವೊಬ್ಬ ರಾಜಕಾರಣಿಯೂ ಮಠವನ್ನು ದುರುಪಯೋಗ ಪಡಿಸಿಕೊಳ್ಳಲು ಸಾಧ್ಯವಿಲ್ಲ,  ಅದು ಸರಿಯೂ ಅಲ್ಲ ಎಂದು ವಿನಯ್ ಕುಲಕರ್ಣಿ ಕಿಡಿ ಕಾರಿದ್ದಾರೆ.
ಶಿವಕುಮಾರ ಎಂಬ ಮಠದ ಆಡಳಿತಾಧಿಕಾರಿ ಮಾತನಾಡಿರುವ ಆಡಿಯೋ ಟೇಪ್ ನಲ್ಲಿ ವೀರಶೈವ ಮತ್ತು ಲಿಂಗಾಯತ  ಒಂದೇಯಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದು ಲಿಂಗಾಯತ ಮುಖಂಡ ತಂಡ ಹೇಳಿತು.  ಇದಕ್ಕೆ ಮರು ಪ್ರಶ್ನೆ ಹಾಕಿದ ಪತ್ರಕರ್ತರು. ಶಿವಕುಮಾರ ಎಂಬುವರು ಎಸ್ ಐಟಿ ಕಾಲೇಜಿನ ಡಿ. ಗ್ರೂಪ್ ನೌಕರ, ಮಠದ ಆಡಳಿತಾಧಿಕಾರಿ ವಿಶ್ವನಾಥ್ ಎಂದು ಮಠದ ಹೇಳಿಕೆಯಲ್ಲಿ ಸ್ಪಷ್ಟನೆ ನೀಡಲಾಗಿದೆ,  ಇದಕ್ಕೆ ಏನು ಹೇಳುತ್ತೀರಿ ಎಂದು ಪ್ರಶ್ನಿಸಿದರು,  ಆದರೆ ಇದಕ್ಕೆ  ಸುದ್ದಿಗೋಷ್ಠಿಯಲ್ಲಿದ್ದ ಯಾರೋಬ್ಬರು ಪ್ರತಿಕ್ರಿಯಿಸಲು ನಿರಾಕರಿಸಿದರು. 
SCROLL FOR NEXT